ಪುತ್ತೂರು : ಹೊಟ್ಟೆ ನೋವೆಂದು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾದ ಬಾಲಕನಿಗೆ ಶಸ್ತ್ರ ಚಿಕಿತ್ಸೆ ನಡೆಸಿದ ಬಳಿಕ ಸರಿಯಾದ ಉಪಕರಣವಿಲ್ಲವೆಂದು ರೋಗಿಯನ್ನು ಆಸ್ಪತ್ರೆಯವರು ಮಂಗಳೂರಿಗೆ ಕಳುಹಿಸಿದ್ದು ಅಲ್ಲಿ ಆತ ಮೃತಪಟ್ಟಿರುವುದಾಗಿ ವೈದರು ತಿಳಿಸಿದ್ದು, ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ ಮೃತನ ಮನೆಯವರು ಠಾಣೆಗೆ ದೂರು ನೀಡಿದ ಘಟನೆ ನಡೆದಿದೆ.
ಸುಳ್ಯ ಶಾಂತಿನಗರ ನಿವಾಸಿ ಸಂಜೀವ ಅವರ ಪುತ್ರ ಮಗ ಶ್ರೀಜಿತ್ (17) ಮೃತ ಬಾಲಕ.

ಮೃತ ಶ್ರೀಜಿತ್
ಆ. 12 ರಂದು ಶ್ರೀಜಿತ್ ಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಆತನನ್ನು ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ರಾತ್ರಿ ಕರೆದುಕೊಂಡು ಬರಲಾಗಿದ್ದು, ಅಲ್ಲಿದ್ದ ಡ್ಯೂಟಿ ಡಾಕ್ಟರ್ ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿಕೊಂಡಿದ್ದಾರೆ.
ಆ.13 ರಂದು ಪರೀಕ್ಷಿಸಿದ ಅಲ್ಲಿನ ವೈದ್ಯರು ಶಸ್ತ್ರ ಚಿಕಿತ್ಸೆಯ ಅಗತ್ಯವಿದೆಯೆಂದು ತಿಳಿಸಿದ್ದು, ಅದೇ ದಿನ ಸಂಜೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಬಳಿಕ ರೋಗಿಯನ್ನು ಐಸಿಯು ವಾರ್ಡ್ ಕರೆತಂದು ಶಸ್ತ್ರಚಿಕಿತ್ಸೆ ಮಾಡಿದ ವಿಚಾರ ತಿಳಿಸಿರುತ್ತಾರೆ. ಬಳಿಕ ಅಲ್ಲಿಯೇ ಚಿಕಿತ್ಸೆ ಮುಂದುವರಿಸಿರುತ್ತಾರೆ.
ಆ.14 ರಂದು ಬೆಳಿಗ್ಗೆ 9 ಗಂಟೆಗೆ ಆಸ್ಪತ್ರೆಯ ವೈದ್ಯರು ಬಾಲಕನನ್ನು ನೋಡಿಕೊಳ್ಳಲು ನಮ್ಮಲ್ಲಿ ಸರಿಯಾದ ಉಪಕರಣ ಇಲ್ಲ ಕೂಡಲೇ ಮಂಗಳೂರಿಗೆ ಕರೆದುಕೊಂಡು ಹೋಗಿ ಎಂದು ಸೂಚಿಸಿರುತ್ತಾರೆ. ಅದರಂತೆ ಬಾಲಕನ ಮನೆಯವರು ಆಂಬ್ಯುಲೆನ್ಸ್ ವಾಹನದಲ್ಲಿ ಆತನನ್ನು ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಮಧ್ಯಾಹ್ನ ಬಾಲಕನನ್ನು ಪರೀಕ್ಷಿಸಿದ ವೈದ್ಯರು ಆತ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.
ಬಾಲಕನ ಸಾವಿನ ಕುರಿತು ಸಂಶಯ ವ್ಯಕ್ತಪಡಿಸಿ ಮನೆಯವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, CRPC ಕಲಂ174 (3) & (iv) ರಂತೆ ಅಸಹಜ ಸಾವಿನ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ..