ಮಂಗಳೂರು: ಕೊರೊನಾ ಕರ್ಫ್ಯೂವಿನಿಂದಾಗಿ ನಾಗರಿಕರಿಗೆ ಅಗತ್ಯ ವಸ್ತುಗಳ ಖರೀದಿಗೆ ಸಮಯ ಸಾಲದಾಗಿದ್ದು, ಆದ್ದರಿಂದ ಈಗ ದ.ಕ. ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ವಿಧಿಸಿರುವ ಸಮಯವನ್ನು ವಿಸ್ತರಿಸುವಂತೆ ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದ ನಿಯೋಗ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.
ಈ ಬಗ್ಗೆ ಮಾತನಾಡಿರುವ ಶಾಸಕ ಕಾಮತ್, ಇಡೀ ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿದರೆ ಮಂಗಳೂರಿನಲ್ಲಿ ಹೆಚ್ಚಿನ ವಾಣಿಜ್ಯ ವಹಿವಾಟು ನಡೆಯುತ್ತಿದೆ. ಹಾಗಾಗಿ ದ.ಕ. ಜಿಲ್ಲೆಯಲ್ಲಿ ಅಗತ್ಯ ಸಾಮಗ್ರಿ ಖರೀದಿಗೆ ನೀಡಿರುವ ಅವಧಿಯನ್ನು ಮಂಗಳೂರು ನಗರ ದಕ್ಷಿಣದಲ್ಲಿ ಒಂದು ಗಂಟೆ ವಿಸ್ತರಿಸಬೇಕು. ಸದ್ಯ ಬೆಳಗ್ಗೆ 6 ರಿಂದ 9 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಸಮಯಾವಕಾಶ ನೀಡಲಾಗಿದೆ. ಆದರೆ, ಮಂಗಳೂರು ನಗರದಲ್ಲಿ ಅಂಗಡಿಗಳು 7 ಗಂಟೆಯ ನಂತರವೇ ತೆರೆಯಲಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಖರೀದಿಗೆ ತಡವಾಗುತ್ತಿದೆ. ಹಾಗಾಗಿ ರಾಜ್ಯ ಸರಕಾರ ಜಾರಿಗೊಳಿಸಿರುವ ಕರ್ಫ್ಯೂ ನಿಯಮಾವಳಿ ಮಂಗಳೂರಿಗೂ ಅನ್ವಯವಾಗುವಂತೆ ಆದೇಶ ಜಾರಿಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿಕೊಂಡಿದ್ದೇವೆ ಎಂದರು.
ಕೊರೊನಾ ಕರ್ಫ್ಯೂ ಸಂದರ್ಭ ಬ್ಯಾಂಕ್ ನೌಕರರು, ವಿವಿಧ ಸವಲತ್ತು ಪಡೆಯಲು ಬ್ಯಾಂಕು ಅಥವಾ ಅಂಚೆ ಕಚೇರಿಗಳಿಗೆ ತೆರಳುವವರಿಗೆ, ಬೀಡಿ ಉದ್ಯಮಿಗಳಿಗೆ, ಬೀಡಿ ನೌಕರರಿಗೆ, ಹೊಟೇಲ್ ಕಾರ್ಮಿಕರು, ಕಟ್ಟಡ ಕಾರ್ಮಿಕರು ಸೇರಿದಂತೆ ಇತರ ವರ್ಗದ ಕಾರ್ಮಿಕರನ್ನು ಪರಿಶೀಲನೆ ನಡೆಸಿ ಓಡಾಟಕ್ಕೆ ಅನುಮತಿ ನೀಡಬೇಕು. ಹಿರಿಯ ನಾಗರಿಕರಿಗೆ ನಡೆದುಕೊಂಡು ಸಾಮಗ್ರಿ ತರಲು ಸಮಸ್ಯೆ ಉಂಟಾಗುತ್ತಿದೆ. ಹಾಗಾಗಿ ಹಿರಿಯ ನಾಗರಿಕರಿಗೆ ಸಾಮಗ್ರಿ ಖರೀದಿಗೆ ವಾಹನ ಬಳಸಲು ಅವಕಾಶ ಕಲ್ಪಿಸಬೇಕು. ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಹಂಚಿಕೆ ನಡೆಸಲು ಅವಕಾಶ ಕಲ್ಪಿಸಬೇಕೆಂದು ಸಚಿವರಿಗೆ ಮನವಿ ಸಲ್ಲಿಸಿದ್ದೇವೆ. ಸಚಿವರು ಮನವಿ ಪರಿಶೀಲಿಸಿ ಆದೇಶ ನೀಡುವ ಭರವಸೆ ನೀಡಿದ್ದಾರೆ ಎಂದು ಶಾಸಕರು ಹೇಳಿದ್ದಾರೆ.