ಪುತ್ತೂರು: ಪುತ್ತಿಲ ಪರಿವಾರದ ವತಿಯಿಂದ ಡಿ.24 ಮತ್ತು 25 ರಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಲೋಕಕಲ್ಯಾಣರ್ಥವಾಗಿ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಬೃಹತ್ ಸಂತ ಸಮ್ಮೇಳನ ನಡೆಯುವ ಬಗ್ಗೆ ಪೂರ್ವಭಾವಿ ಸಭೆ ಮುಕ್ರಂಪಾಡಿಯ ಸುಭದ್ರ ಕಲ್ಯಾಣಮಂಟಪದಲ್ಲಿ ನಡೆಯಿತು.
ಸಭೆಯಲ್ಲಿ ಮಾತನಾಡಿದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಡಿ.24 ರ ಸಂಜೆ ಬೊಳುವಾರಿನಿಂದ ತಿರುಪತಿಯಿಂದ ಆಗಮಿಸುವ ದೇವರ ವೈಭವದ ಮೆರವಣಿಗೆ, ನಂತರ ರಾತ್ರಿ ಪೂಜೆ ನಂತರ ಸಾಂಸ್ಕೃತಿಕ ಕಾರ್ಯಕ್ರಮ, ಮರುದಿನ ಬೆಳಿಗ್ಗೆ ವಿಶೇಷ ಉದಯಾಸ್ತಮಾನ ಪೂಜೆ , ನಂತರ ರಾಮಕೃಷ್ಣ ಕಾಟುಕುಕ್ಕೆ ಅವರಿಂದ ಭಜನೋತ್ಸವ ಸಂಜೆ ಬೃಹತ್ ಸಂತ ಸಮ್ಮೇಳನ ನಡೆಯಲಿದೆ.
ಸಭೆಯ ನಂತರ ಶ್ರೀನಿವಾಸ ಕಲ್ಯಾಣೋತ್ಸವ ಜರುಗಲಿದೆ. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.
ಎರಡು ದಿನದ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಅಂದಾಜು 1 ಲಕ್ಷಕ್ಕೂ ಅಧಿಕ ಜನ ಸೇರಲಿದ್ದು, ಎರಡು ದಿನವೂ ಅನ್ನದಾನ ಇರಲಿದೆ ಎಂದರು.
ಪೂರ್ವಭಾವಿ ಸಭೆಯಲ್ಲಿ ಸಮಿತಿ ರಚನೆ ನಡೆಯಿತು.
ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಮಾರ್ತ, ಶ್ರೀನಿವಾಸ ಕಲ್ಯಾಣೋತ್ಸವದ ಅಧ್ಯಕ್ಷರಾದ ಶಶಾಂಕ್ ಕೊಟೇಚಾ, ಪ್ರಧಾನ ಕಾರ್ಯದರ್ಶಿ ಮನೀಶ್ ಕುಲಾಲ್, ಮಹಿಳಾ ಘಟಕದ ಅಧ್ಯಕ್ಷೆ ಮಲ್ಲಿಕಾ ಪ್ರಸಾದ್, ಗಣೇಶ್ ಭಟ್ ಮಕರಂದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪುತ್ತಿಲ ಪರಿವಾರದ ಕಾರ್ಯದರ್ಶಿ ರವಿಕುಮಾರ್ ರೈ ಕೆದಂಬಾಡಿ ಮಠ ಕಾರ್ಯಕ್ರಮ ನಿರೂಪಿಸಿದರು.