ಬೆಂಗಳೂರು: ಕೊರೊನಾ ಎರಡನೇ ಅಲೆಯ ಸಂಕಷ್ಟದ ಹಿನ್ನೆಲೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಇಂದು ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಇಂದು ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿ ಸಿಎಂ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ರು. ಕೋವಿಡ್-19 ಎರಡನೇ ಆಲೆ ತೀವ್ರತೆಯ ಹಿನ್ನೆಲೆ, ರಾಜ್ಯ ಸರ್ಕಾರ ಮೇ 24 ರವರೆಗೂ ವಾಣಿಜ್ಯ ಚಟುವಟಿಕೆಗಳಿಗೆ ನಿರ್ಬಂಧ ಹೇರಿತ್ತು. ಕೃಷಿ, ಸರಕು ಸಾಗಣೆ, ಹೊಟೇಲ್ ಸೇರಿದಂತೆ ಅಗತ್ಯ ಸೇವೆಗೆ ಅವಕಾಶ ಕಲ್ಪಿಸಲಾಗಿತ್ತು. ನಿತ್ಯ 6 ಗಂಟೆಯಿಂದ 10 ರವರೆಗೂ ಅಗತ್ಯ ಸೇವೆಗೆ ಅವಕಾಶ ಕೊಟ್ಟಿತ್ತು ಎಂದರು. ನಾಗರೀಕರು ಸಂಕಷ್ಟಕ್ಕೆ ಸಿಲುಕಬಾರದು ಎಂಬುದು ಸರ್ಕಾರದ ಧ್ಯೇಯವಾಗಿತ್ತು. ಹೀಗಾಗಿ ಸರ್ಕಾರ ಸಹಾಯಹಸ್ತ ನೀಡಲು ನಿರ್ಧರಿಸಿದೆ. 1250 ಕೋಟಿಗೂ ಹೆಚ್ಚು ಮೊತ್ತದ ಪ್ಯಾಕೇಜ್ ಘೋಷಿಸುತ್ತಿದ್ದೇವೆ ಎಂದರು.
- ಸಾಲ ಮರು ಪಾವತಿ ದಿನಾಂಕ ಜುಲೈ ಅಂತ್ಯದವರೆಗೆ ವಿಸ್ತರಣೆ , ರೈತರು, ಸ್ವಸಹಾಯ ಸಂಘ, ಸೊಸೈಟಿ ಸಾಲ ಮರು ಪಾವತಿ ದಿನಾಂಕ ಜುಲೈ ಅಂತ್ಯದವರೆಗೆ ವಿಸ್ತರಣೆ ಮಾಡಲಾಗುವುದು.
- ಪಿಎಂಜಿಕೆವೈ ಯೋಜನೆಯಡಿ ಬಿಪಿಎಲ್ ಅಂತ್ಯೋದಯ ಕಾರ್ಡ್ಗೆ 5 ಕೆಜಿ ಅಕ್ಕಿ ನೀಡಲಾಗುವುದು.
- ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿರುವವರಿಗೂ ಎರಡು ತಿಂಗಳು ಬಿಪಿಎಲ್ ಉಚಿತ ಅಕ್ಕಿ ಆಹಾರ ಧಾನ್ಯ ನೀಡಲಿದ್ದೇವೆ. ಎಪಿಎಲ್ ಕಾರ್ಡ್ಗೆ ಕೆಜಿಗೆ 15 ರೂ ನಂತೆ ಅಕ್ಕಿ ಕೊಡುತ್ತೇವೆ ಎಂದರು.
- ಶಿಕ್ಷಕರು, ಲೈನ್ ಮ್ಯಾನ್, ಗ್ಯಾಸ್ ಸಿಲಿಂಡರ್ ಡೆಲಿವರಿ ಬಾಯ್ಸ್ ಇವರನ್ನೆಲ್ಲಾ ಫ್ರಂಟ್ ಲೈನ್ ವಾರಿಯರ್ಸ್ ಎಂದು ಪರಿಗಣಿಸಿ ಲಸಿಕೆ ನೀಡಲು ನಿರ್ಧಾರ ಮಾಡಲಾಗಿದೆ.
- ಸೋಂಕಿತ ರೋಗಿಗಳಿಗೆ ಸರ್ಕಾರದಿಂದ ನಿಗದಿತ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗ್ತಿದೆ ಎಂದರು.
- ಹೂವು ಬೆಳೆಗಾರರಿಗೆ, ಆಟೋ, ಟ್ಯಾಕ್ಸಿ ಚಾಲಕರಿಗೆ, ಅಸಂಘಟಿತ ಕಾರ್ಮಿಕರಿಗೆ, ಕಲಾವಿದರು, ಕಲಾ ತಂಡಗಳಿಗೆ ಆರ್ಥಿಕ ಸಹಾಯ
- ₹1,250 ಕೋಟಿಗೂ ಹೆಚ್ಚು ಪ್ಯಾಕೇಜ್ ಘೋಷಣೆಯಲ್ಲಿ ಹೂವು ಬೆಳೆಗಾರರಿಗೆ ಹೆಕ್ಟೇರ್‌ಗೆ 10 ಸಾವಿರ ಸಹಾಯಧನ, ಇದಕ್ಕೆ 70 ಕೋಟಿ ರೂಪಾಯಿ ಖರ್ಚಾಗಲಿದೆ.
- ನೋಂದಣಿ ಮಾಡಿಸಿದ ಆಟೋ ಚಾಲಕರಿಗೆ ಆಟೋ, ಮ್ಯಾಕ್ಸಿ ಚಾಲಕರಿಗೆ 3 ಸಾವಿರ ರೂಪಾಯಿ, ಅಸಂಘಟಿತ ಕಾರ್ಮಿಕರಿಗೆ ತಲಾ 2 ಸಾವಿರ ರೂಪಾಯಿ ನೀಡಲಾಗುವುದು, ಇದಕ್ಕಾಗಿ 61 ಕೋಟಿ ರೂಪಾಯಿ ಖರ್ಚಾಗಲಿದೆ ಹಾಗೂ ಕಲಾವಿದರು, ಕಲಾ ತಂಡಗಳಿಗೆ ತಲಾ 3 ಸಾವಿರ ರೂ.ನಂತೆ 16,100 ಜನರಿಗೆ ನೀಡಲಾಗುವುದು ಇದಕ್ಕೆ 4 ಕೋಟಿ ರೂಪಾಯಿ ಖರ್ಚಾಗಲಿದೆ ಎಂದರು.