ಸುಬ್ರಹ್ಮಣ್ಯ : ಮಂಗಳೂರು- ಬೆಂಗಳೂರು ರೈಲು ಮಾರ್ಗದ ಎಡಕುಮೇರಿ -ಕಡಗರವಳ್ಳಿ ನಡುವಣ ದೋಣಿಗಲ್‌ನಲ್ಲಿ ಭೂಕುಸಿತ ನಡೆದಲ್ಲಿ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ಸುಮಾರು 12 ದಿನಗಳ ಬಳಿಕ ಗುರುವಾರದಿಂದ ರೈಲು ಸಂಚಾರ ಪುನರಾರಂಭಗೊಂಡಿದೆ.
ಜು. 26ರಂದು ರಾತ್ರಿ ಹಾಸನ ಜಿಲ್ಲೆಯ ಎಡಕುಮೇರಿ -ಕಡಗರವಳ್ಳಿ ನಡುವಣ ದೋಣಿಗಲ್ ಎಂಬಲ್ಲಿ ರೈಲು ಮಾರ್ಗದಲ್ಲಿ ಭೂ ಕುಸಿತ ಸಂಭವಿಸಿತ್ತು. ಪರಿಣಾಮವಾಗಿ ತತ್‌ಕ್ಷಣ ದಿಂದಲೇ ಮಂಗಳೂರು- ಬೆಂಗಳೂರು ನಡುವಣ ಎಲ್ಲ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಿಂದ ಹೊರಟಿದ್ದ ಬಿಜಾಪುರ ಎಕ್ಸ್‌ಪ್ರೆಸ್ ರೈಲನ್ನು ಹಿಂದಕ್ಕೆ ಕರೆಯಿಸಿಕೊಳ್ಳಲಾಗಿತ್ತು. ಘಟನೆ ಸಂಭವಿಸಿದ ತತ್‌ಕ್ಷಣದಿಂದಲೇ ರೈಲು ಮಾರ್ಗದ ದುರಸ್ತಿ ಕಾರ್ಯ ಆರಂಭಿಸಲಾಗಿತ್ತು.
ಘಟನೆ ಸಂಭವಿಸಿದ ಸ್ಥಳ ಘಟ್ಟ ಪ್ರದೇಶವಾಗಿದ್ದು, ಭಾರೀ ಸವಾಲಿನ ನಡುವೆ ದುರಸ್ತಿ ನಡೆಸಲಾಗಿತ್ತು. ನಿರಂತರ ಭಾರೀ ಮಳೆ, ಹವಮಾನ ವೈಪರೀತ್ಯಗಳ ನಡುವೆಯೂ ರೈಲು ಮಾರ್ಗದ ದುರಸ್ತಿಯನ್ನು ಮುಂದು ವರಿಸಲಾಗಿತ್ತು.
ಸುಮಾರು 500ಕ್ಕೂ ಅಧಿಕ ಕಾರ್ಮಿಕರು ಹಗಲು-ರಾತ್ರಿ ದುರಸ್ತಿ ಕಾರ್ಯದಲ್ಲಿ ತೊಡಗಿದ್ದರು. 3,500ಕ್ಕೂ ಅಧಿಕ ಘನ ಮೀಟರ್ ಬಂಡೆಗಳನ್ನು, 1 ಲಕ್ಷ ಮರಳು ತುಂಬಿದ ಚೀಲಗಳನ್ನು, 10ರಷ್ಟು ಹಿಟಾಚಿ ಮತ್ತಿತರ ಯಂತ್ರಗಳ ಸಹಿತ ದುರಸ್ತಿ ಕಾರ್ಯಕ್ಕೆ ಬೇಕಾಗುವ ಕಚ್ಚಾ ವಸ್ತುಗಳು, ಕಾರ್ಮಿಕರ ಅಗತ್ಯ ವಸ್ತುಗಳನ್ನು ಸ್ಥಳಕ್ಕೆ ಪೂರೈಸಿ ನಿರಂತರ ಶ್ರಮಿಸಲಾಗಿತ್ತು. ಆ.20ರ ವರೆಗೂ ಕೆಲವು ಪೂರಕ ಕೆಲಸಗಳು ಸ್ಥಳದಲ್ಲಿ ಮುಂದುವರಿಯಲಿವೆ ಎಂದು ತಿಳಿದುಬಂದಿದೆ.