ಪಾಡ್ದನದಿಂದ ಪಾರಾಯಣದವರೆಗೆ, ಮಹಾಕಾವ್ಯದಿಂದ ಕವಿತೆಯವರೆಗೆ ಸಾಹಿತ್ಯಲೋಕ ವಿಶಾಲವಾಗಿದೆ, ಈ ಹಾಡು, ಕವಿತೆ ಇಲ್ಲದ ಲೋಕ ಕಲ್ಪನೆಗೆ ನಿಲುಕದ್ದು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯ ಕನ್ನಡ ಪ್ರಾಧ್ಯಾಪಕರು ಮತ್ತು ಕವಿಗಳು ಆಗಿರುವ ಡಾ. ಧನಂಜಯ ಕುಂಬ್ಳೆ ಹೇಳಿದರು. ಇವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿಯ ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ಕನ್ನಡ ವಿಭಾಗದ ಸಂಯುಕ್ತ ಆಶ್ರಯದಲ್ಲಿ ನಡೆದ ಕನ್ನಡ ಕವಿತಾ ರಚನೆ ಹಾಗೂ ಆಸ್ವಾದನೆ ಕುರಿತಂತೆ “ಕಾವ್ಯ ಕಮ್ಮಟ” ಆನ್ಲೈನ್ ಕಾರ್ಯಾಗಾರದಲ್ಲಿ ಹೇಳಿದರು.
ಆಸ್ವಾದನೆ ಇಲ್ಲದಿದ್ದರೆ ಕವಿತಾ ರಚನೆ ಸಾಧ್ಯವಿಲ್ಲ. ಭಾವ ಮತ್ತು ನಿರೂಪಣೆಯನ್ನು ಲಕ್ಷ್ಯಕ್ಕೆ ತೆಗೆದುಕೊಂಡು ಓದಬೇಕು ಮತ್ತು ನವೀನ ದೃಷ್ಟಿಯಿಂದ ನೋಡಿದಾಗ ಕಾವ್ಯ ರಚನೆ ಸಾಧ್ಯ ಎಂದು ತಿಳಿಸಿದರು.
ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ವರದರಾಜ ಚಂದ್ರಗಿರಿ ಇವರು ಸರಿಯಾದ ಜಾಗದಲ್ಲಿ ಸರಿಯಾದ ಶಬ್ಧವನ್ನು ಸರಿಯಾದ ಕಾಲದಲ್ಲಿ ಜೋಡಿಸಿದರೆ ಕಾವ್ಯ ಸುಂದರವಾಗಿ ಮೂಡುತ್ತದೆ ಎಂದು ಅಭಿಪ್ರಾಯಪಟ್ಟರು ಮತ್ತು ನಾವು ಇತ್ತೀಚೆಗಷ್ಟೇ ಕಳೆದುಕೊಂಡ ಕವಿಗಳಾದ ಸಿದ್ದಲಿಂಗಯ್ಯ ಅವರಿಗೆ ಈ ಕಾರ್ಯಕ್ರಮ ಸಮರ್ಪಣೆ ಎಂದು ತಿಳಿಸಿದರು.
ಗೂಗಲ್ ಮೀಟ್ ಮೂಲಕ ನಡೆದ ಈ ಕಾರ್ಯಕ್ರಮ ಯು ಟ್ಯೂಬ್ ಮೂಲಕ ನೇರ ಪ್ರಸಾರವಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಮಾತ್ರವಲ್ಲದೆ ಇತರೆ ಕಾಲೇಜಿನ ಸಾಹಿತ್ಯಾಸಕ್ತರು ಭಾಗವಹಿಸಿದರು. ಪ್ರಾಸ್ತಾವಿಕ ಮಾತುಗಳೊಡನೆ ಸರ್ವರನ್ನೂ ಕಾಲೇಜಿನ ಐಕ್ಯೂಎಸಿ ಸಂಚಾಲಕರಾದ ಹರಿಪ್ರಸಾದ್ ಎಸ್ ಇವರು ಸ್ವಾಗತಿಸಿದರು. ಕನ್ನಡ ವಿಭಾಗದ ಉಪನ್ಯಾಸಕರಾದ ಶ್ರೀಮತಿ ನಿರ್ಮಲಾ ಎನ್ ಕೆ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಿದರು, ಶ್ರೀಮತಿ ಭವ್ಯ ವಿ ವಂದಿಸಿದರು, ಶ್ರೀಮತಿ ಮೈತ್ರಿ ಭಟ್ ಕಾರ್ಯಕ್ರಮ ನಿರ್ವಹಿಸಿದರು.