ಬೆಳಗಾವಿ: ಆ ಮಗು ಬದುಕಿದ್ದರೇ ಇಪ್ಪತ್ತು ದಿನದ ಕೂಸಾಗುತ್ತಿತ್ತು, ಎತ್ತಿ ಆಡಿಸಿ ಹಾಲುಣಿಸಿ ಕಂದಮ್ಮನ ಆರೈಕೆಯೂ ಮಾಡಬೇಕಿತ್ತು. ಆದರೆ ಹೆತ್ತಮ್ಮ ಮದುವೆ ಆಗದೇನೇ ಮಾಡಬಾರದ ಕೆಲಸ ಮಾಡಿ ಜೈಲು ಸೇರಿದ್ದಾಳೆ .
ಇದಕ್ಕೆ ಸಾಥ್ ನೀಡಿದ್ದ ತಂದೆಯೂ ಕೂಡ ಕಂಬಿ ಎನಿಸುವಂತಾಗಿದೆ. ಅಷ್ಟಕ್ಕೂ ಅಲ್ಲಿ ಆ ಮಗುವಿಗೆ ಆಗಿದ್ದಾದರೂ ಏನು? ಮದುವೆಯಾಗದೇ ಅಪ್ಪ-ಅಮ್ಮ ಆದವರ ಸ್ಥಿತಿ ಏನಾಯ್ತು? ಪೊಲೀಸರು ವಿಶೇಷ ಪ್ರಕರಣ ಭೇದಿಸಿದ್ದು ಹೇಗೆ ಅಂತೀರಾ ಈ ಸ್ಟೋರಿ ಓದಿ.
ಜಿಲ್ಲೆಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದಲ್ಲಿ ಮಾ.5ರಂದು ಮನೆಯೊಂದರ ತಿಪ್ಪೆಯಲ್ಲಿ ಶಿಶುವೊಂದು ಸಿಕ್ಕಿದೆ.
ಹೆಣ್ಣು ಶಿಶುವಾಗಿದ್ರೂ ಬಹುತೇಕ ಎಂಟು ತಿಂಗಳ ನಂತರ ಜನಸಿದ್ದ ಮಗುವಿದು ಅಂತಾ ಅಂದು ಸ್ಥಳಕ್ಕೆ ಭೇಟಿ ನೀಡಿದ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಇದನ್ನ ಗಮನಿಸಿದ ಪೊಲೀಸರು ಯಾರೋ ಹೆಣ್ಣು ಶಿಶು ಎಂಬ ಕಾರಣಕ್ಕೆ ಈ ರೀತಿ ಪ್ಲಾಸ್ಟಿಕ್ನಲ್ಲಿ ಕಟ್ಟಿ ಎಸೆದು ಹೋಗಿದ್ದಾರೆ ಅಂದುಕೊಂಡಿದ್ದರು.
ಈ ವೇಳೆ ಒಂದು ಕೇಸ್ ಕೂಡ ಪಡೆದುಕೊಂಡು ಮಗುವಿನ ಮರಣೋತ್ತರ ಪರೀಕ್ಷೆ ನಡೆಸಿ ಪೊಲೀಸರೇ ಅಂತ್ಯಸಂಸ್ಕಾರ ಕೂಡ ನೆರವೇರಿಸಿದ್ದರು.
ಇದಾದ ಬಳಿಕ ನಾಲ್ಕು ದಿನದ ಹಿಂದೆ ಮರಣೋತ್ತರ ಪರೀಕ್ಷೆ ವರದಿ ಕೂಡ ಬಂದಿದ್ದು, ಇದರಲ್ಲಿ ಮಗುವಿನ ತಲೆ ಭಾಗಕ್ಕೆ ಗಾಯವಾಗಿ ಮೃತಪಟ್ಟಿದೆ ಅಂತಾ ಬರುತ್ತೆ. ಕೂಡಲೇ ಈ ಪ್ರಕರಣವನ್ನ ಕಿತ್ತೂರು ಠಾಣೆ ಪೊಲೀಸರು ಕೊಲೆ ಎಂದು ಮಾಡಿಕೊಂಡು ಆರೋಪಿಗಳ ಪತ್ತೆಗಾಗಿ ಶೋಧ ನಡೆಸುತ್ತಾರೆ.
ಸ್ಥಳೀಯ ಹಾಗೂ ಅಕ್ಕಪಕ್ಕದ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಬಾಣಂತಿಯರ ಹಾಗೂ ಘಟನೆ ನಡೆದ ಒಂದು ವಾರದಲ್ಲಿ ಹೆರಿಗೆ ಆಗಬೇಕಿದ್ದ ಗರ್ಭಿಣಿಯರ ಹೆಸರು ಪತ್ತೆ ಹೆಚ್ಚುತ್ತಾರೆ.
ಇದರಲ್ಲಿ ಆರೋಪಿ ತಾಯಿ ಹೆಸರು ಸಿಗುತ್ತದೆ, ಇನ್ನೂ ಶಿಶು ಕೂಡ ಬಿದ್ದ ತಿಪ್ಪೆ ಅವರ ಮನೆಯ ಪಕ್ಕದಲ್ಲೇ ಇರೋ ಕಾರಣಕ್ಕೆ ಈ ಸಂಶಯದಲ್ಲಿ ಬಂದು ವಿಚಾರಣೆ ನಡೆಸಿ ಕಡೆಗೂ ಆರೋಪಿಗಳನ್ನ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗ್ತಾರೆ.
ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದ ಕಿತ್ತೂರು ಠಾಣೆ ಪೊಲೀಸರು ಕಡೆಗೂ ಶಿಶುವಿನ ಹೆತ್ತಮ್ಮನನ್ನ ಹುಡುಕುವಲ್ಲಿ ಯಶಸ್ವಿಯಾಗ್ತಾರೆ.
ಆಕೆಯ ಹೆಸರು ಸಿಮ್ರಾನ್ ಅಲಿಯಾಸ್ ಮುಸ್ಕಾನ್ ಮಾಣಿಕಬಾಯಿ ಅಂತಾ 22 ವರ್ಷದ ಅಂಬಡಗಟ್ಟಿ ಗ್ರಾಮದ ನಿವಾಸಿ.
ಈಕೆಯನ್ನ ಕರೆದುಕೊಂಡು ಬಂದು ವಿಚಾರಣೆ ನಡೆಸಿದಾಗ ಬಯಲಾಗಿದ್ದೆ ಪ್ರೀತಿ ಹೆಸರಲ್ಲಿ ಮಾಡಿದ್ದ ಅನೈತಿಕ ಸಂಬಂಧ.
ಇದೇ ಗ್ರಾಮದ 31 ವರ್ಷದ ಮಹಾಬಳೇಶ್ ಕಾಳೋಜಿ ಎಂಬಾತನ ಪ್ರೀತಿ ಮಾಡಿದ್ದಾಳೆ. ಜಾತಿ ಬೇರೆ ಬೇರೆಯಾದ್ರೂ ಪ್ರೀತಿ ಮಾಡಿದ್ದ ಇವರು ಮನೆಯವರ ವಿರೋಧದ ನಡುವೆಯೂ ಮದುವೆಯಾಗಿದ್ರೂ.
ಎಲ್ಲಿಯಾದ್ರೂ ಬದುಕು ಕಟ್ಟಿಕೊಳ್ಳಬಹುದಿತ್ತು. ಆದರೆ ಈ ಪಾಪಿಗಳು ಮದುವೆಗೂ ಮುನ್ನವೇ ಸಂಬಂಧ ಬೆಳೆಸಿ ಅದರಿಂದ ಗರ್ಭಣಿಯಾಗಿದ್ದ ಈ ಮುಸ್ಕಾನ್ಗೆ ತಾನೂ ಗರ್ಭಿಣಿ ಅನ್ನೋದು ಗೊತ್ತಾಗಲು ಆರು ತಿಂಗಳ ತೆಗೆದುಕೊಂಡಿದ್ದಾಳೆ.
ಇದಾದ ಬಳಿಕ ಮೊನ್ನೆ ಒಂಬತ್ತು ತಿಂಗಳು ಮುಕ್ತಾಯವಾಗಿ 5ರಂದು ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ಪ್ರಸವ ವೇದನೆ ಶುರುವಾಗಿದೆ.
ಇದೇ ಸಂದರ್ಭದಲ್ಲಿ ಪ್ರಿಯಕರ ಮಹಾಬಳೇಶ್ಗೆ ವಿಡಿಯೋ ಕಾಲ್ ಮಾಡಿ ತನಗೆ ಆಗ್ತಿರುವ ವೇದನೆ ಹೇಳಿಕೊಂಡಿದ್ದಾಳೆ. ಆತ ಹೇಳಿದಂತೆ ಈಗ ಮಗುವಿಗೆ ಜನ್ಮ ಕೂಡ ನೀಡಿದ್ದಾಳೆ, ಇದಾದ ಬಳಿಕ ಮಗು ಅತ್ರೇ ಗೊತ್ತಾಗುತ್ತೆ ಅಂತಾ ಬಾಯಿ ಮೂಗು ಹಿಡಿದು ಡಬ್ಬದಲ್ಲಿ ಹಾಕಿದ್ದಾಳೆ. ಈ ವೇಳೆ ತಲೆಗೆ ಬಲವಾಗಿ ಪೆಟ್ಟು ಬಿದ್ದು ಮಗು ಸಾವನ್ನಪ್ಪಿದೆ.
ಇದಾದ ಬಳಿಕ ಶಿಶುವನ್ನ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ತಿಪ್ಪೆಗೆಸದು ಇದಕ್ಕೂ ತನಗೂ ಸಂಬಂಧ ಇಲ್ಲ ಎನ್ನುವಂತೆ ಉಳಿದುಕೊಳ್ತಾಳೆ. ಇದಾದ ಬಳಿಕ ಅಕ್ಕಪಕ್ಕದವರು ಶಿಶು ಬಿದ್ದಿದ್ದನ್ನ ಗಮನಿಸಿ ಕಿತ್ತೂರು ಠಾಣೆ ಪೊಲೀಸರಿಗೆ ಸುದ್ದಿ ಮುಟ್ಟಿಸಿರುತ್ತಾರೆ.
ಪ್ರಕರಣದಲ್ಲಿ ತಾಯಿ ಪತ್ತೆ ಹಚ್ಚಿದ ಪೊಲೀಸರು ಇದೀಗ ತಂದೆಯಾದ ಮಹಾಬಳೇಶನನ್ನು ಹಿಡಿದು ಜೈಲಿಗೆ ಕಳುಹಿಸಿದ್ದಾರೆ.
ಶಿಶುಗಳನ್ನ ತಿಪ್ಪೆಗೆ ಎಸೆಯುವುದು, ಚರಂಡಿಗೆ ಎಸೆಯುವುದು ಆಗಾಗ ಕೇಳಿಸಿಕೊಳ್ತಿದ್ದೇವು. ಆದರೆ ಬಹುತೇಕ ಕೇಸ್ ಗಳಲ್ಲಿ ಯಾರು ತಂದೆ-ತಾಯಿ ಅನ್ನೋದು ಕೂಡ ಗೊತ್ತಾಗುತ್ತಿರಲಿಲ್ಲ.
ಆದರೆ ಈ ಪ್ರಕರಣದಲ್ಲಿ ಕಿತ್ತೂರು ಠಾಣೆ ಪೊಲೀಸರ ಕಾಳಜಿಯಿಂದಾಗಿ ಹೆತ್ತ ಪಾಪಿಗಳನ್ನ ಬಂಧಿಸುವುದಷ್ಟೇ ಅಲ್ಲದೇ ಅವರಿಗೆ ಜೈಲಿಗೆ ಕಳುಹಿಸುವ ಕೆಲಸ ಕೂಡ ಮಾಡಿದ್ದಾರೆ.
ಈ ಮೂಲಕ ಮೃತ ಮಗುವಿನ ಸಾವಿಗೆ ನ್ಯಾಯ ಕೊಡಿಸುವ ಕೆಲಸವಾಗಿದೆ. ಇನ್ನೊಂದು ಕಡೆ ಮಾಡಬಾರದ ಕೆಲಸ ಮಾಡಿ ಜೈಲು ಸೇರಿದವರು ಕಣ್ಣೀರು ಹಾಕ್ತಿದ್ದಾರೆ.