ಪುತ್ತೂರು : ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ, ಆಕೆ ಗರ್ಭವತಿಯಾದ ಬಳಿಕ ವಿವಾಹವಾಗಲು ನಿರಾಕರಿಸಿ ನಾಪತ್ತೆಯಾಗಿದ್ದ ಬಪ್ಪಳಿಗೆ ನಿವಾಸಿ ಕೃಷ್ಣ ಜೆ. ರಾವ್ (21) ನನ್ನು
ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈತನ ವಿರುದ್ಧ ದ.ಕ. ಮಹಿಳಾ ಠಾಣೆಯಲ್ಲಿ ಅತ್ಯಾಚಾರ ಮತ್ತು ನಂಬಿಕೆ ದ್ರೋಹದ ಪ್ರಕರಣ ದಾಖಲಾಗಿತ್ತು. ಸಂತ್ರಸ್ತೆ (21) ಕೂಡ ಪುತ್ತೂರು ನಗರಸಭಾ ವ್ಯಾಪ್ತಿಯ ನಿವಾಸಿಯಾಗಿದ್ದು, ಮಂಗಳೂರಿನ ಕಾಲೇಜೊಂದರಲ್ಲಿ ಪದವಿ ವ್ಯಾಸಂಗ ಪೂರ್ಣಗೊಳಿಸಿದ್ದಾರೆ.
ರಂದು ದಕ್ಷಿಣ ಕನ್ನಡ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅ.ಕ್ರ:49/2025, ಕಲಂ:64(1), 69 ಬಿ.ಎನ್.ಎಸ್ 2023 ಪ್ರಕರಣದಲ್ಲಿ ಆರೋಪಿ ತಲೆಮರೆಸಿಕೊಂಡಿದ್ದ.
ಆರೋಪಿ ಶ್ರೀ ಕೃಷ್ಣ ಜೆ ರಾವ್ (21) ಎಂಬಾತನನ್ನು, ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಪೊಲೀಸ್ ಠಾಣಾ ಪೊಲೀಸರು ದಿನಾಂಕ: 04.07.2025 ರಂದು ರಾತ್ರಿ ಮೈಸೂರಿನ ಟಿ ನರಸಿಪುರ ಎಂಬಲ್ಲಿ ವಶಕ್ಕೆ ಪಡೆದು ಠಾಣೆಗೆ ಕರೆತಂದಿರುತ್ತಾರೆ. ಆರೋಪಿತನ ವಿಚಾರಣೆ ನಡೆಸಲಾಗುತ್ತಿದ್ದು, ಮುಂದಿನ ಕಾನೂನುಕ್ರಮ ಕೈಗೊಳ್ಳಲಾಗುವುದು.
ಪ್ರಕರಣದ ವಿವರ
ಸಂತ್ರಸ್ತೆ ಹಾಗೂ ಆರೋಪಿ ಪುತ್ತೂರು ಪ್ರೌಢಶಾಲೆಯಲ್ಲಿ ಸಹಪಾಠಿಗಳಾಗಿದ್ದರು. ಪ್ರೌಢಾವಸ್ಥೆಗೆ ಬಂದ ನಂತರ ಇವರಿಬ್ಬರು ಪರಸ್ಪರ ಪ್ರೀತಿಸಲು ಆರಂಭಿಸಿದ್ದರು. ಈ ಆತ್ಮೀಯತೆಯಿಂದಾಗಿ ಸಂತ್ರಸ್ತೆ ಆರೋಪಿಯ ಮನೆಗೆ ಆಗಾಗ ಭೇಟಿ ನೀಡುತ್ತಿದ್ದಳು ಎನ್ನಲಾಗಿದೆ. ಸಂತ್ರಸ್ತ ಯುವತಿಯು ನೀಡಿದ ದೂರಿನಂತೆ, 2024ರ ಅಕ್ಟೋಬರ್ 11ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಆರೋಪಿ ಕೃಷ್ಣ ಸಂತ್ರಸ್ತೆಯನ್ನು ತನ್ನ ಮನೆಗೆ ಕರೆಸಿಕೊಂಡಿದ್ದ. ಬಳಿಕ ಬಲವಂತದಿಂದ ದೈಹಿಕ ಸಂಪರ್ಕ ಮಾಡಿದ್ದಾನೆ. ಜನವರಿ ತಿಂಗಳಿನಲ್ಲಿಯು ಮತ್ತೊಮ್ಮೆ ಕೃತ್ಯ ಎಸಗಿದ್ದಾನೆ. ಕೆಲ ತಿಂಗಳ ನಂತರ ಸಂತ್ರಸ್ಥೆ ಗರ್ಭಿಣಿಯಾಗಿರುವ ಅನುಮಾನ ಬಂದಿದ್ದು, ಈ ವಿಚಾರವನ್ನು ಆರೋಪಿ ಕೃಷ್ಣನಲ್ಲಿ ತಿಳಿಸಿದ್ದಾಳೆ. ಮೇ ತಿಂಗಳಿನಲ್ಲಿ ಯುವತಿಯನ್ನು ಮಂಗಳೂರಿನ ಕ್ಲಿನಿಕ್‌ಗೆ ಕರೆದುಕೊಂಡು ಹೋಗಿ ಪರೀಕ್ಷೆ ಮಾಡಿಸಿದಾಗ ಏಳೂವರೆ ತಿಂಗಳ ಗರ್ಭಿಣಿ ಎಂಬುದು ತಿಳಿದು ಬಂದಿದೆ. ಮನೆಮಂದಿ ಬಳಿ ಈ ವಿಚಾರ ಹೇಳದಂತೆ, ನಾನು ನಿನ್ನನ್ನು ಮದುವೆಯಾಗುವುದಾಗಿ ಆರೋಪಿ ಒಪ್ಪಿಸಿದ್ದ. ಅದಾಗ್ಯೂ ಸಂತ್ರಸ್ಥೆ ಪೋಷಕರ ಬಳಿ ವಿಷಯ ತಿಳಿಸಿದ್ದಳು ಎನ್ನಲಾಗಿದೆ.
ಯುವತಿ ಒಂಬತ್ತು ತಿಂಗಳ ಗರ್ಭಿಣಿಯಾಗಿದ್ದು, ಎರಡು ಕುಟುಂಬದ ನಡುವೆ ವಿವಾಹ ಸಂಬಂಧಿತವಾಗಿ ಠಾಣೆಯಲ್ಲಿ ಮಾತುಕತೆ ನಡೆದಿತ್ತು. ವಿವಾಹ ಆಗುವುದಾಗಿ ಆತ ಮುಚ್ಚಳಿಕೆ ನೀಡಿದ್ದ. ಆದರೆ ಮದುವೆ ವಯಸ್ಸು ಪೂರ್ಣವಾದಾಗ ಕೃಷ್ಣ ಮದುವೆಯಾಗಲು ನಿರಾಕರಿಸಿದ್ದಾನೆ.
ಈ ನಡುವೆ ವಿದ್ಯಾರ್ಥಿನಿಗೆ ಹೆರಿಗೆ ಆಗಿದ್ದು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಆರೋಪಿ ಕಳೆದ ಹತ್ತು ದಿನಗಳಿಂದ ನಾಪತ್ತೆ ಆಗಿದ್ದ. ಮಂಗಳೂರು ನ್ಯಾಯಾಲಯದಲ್ಲಿ ನಿರೀಕ್ಷಣ ಜಾಮೀನಿಗೆ ಪ್ರಯತ್ನ ನಡೆಸುತ್ತಿದ್ದು ವಿಚಾರಣೆ ಜು.10 ಕ್ಕೆ ಮುಂದೂಡಲಾಗಿದೆ.