ಪುತ್ತೂರು, ಜೂನ್ 14: ಹಿಂದೂ ಎಕನಾಮಿಕ್ ಫೋರಂ ಹಾಗೂ ಮುಳಿಯ ಮ್ಯಾನೇಜ್ಡ್ ಫಾರ್ಮ್ ಲ್ಯಾಂಡ್ ಸಂಯುಕ್ತ ಆಶ್ರಯದಲ್ಲಿ ಸಮಗ್ರ ಮಲ್ಲಿಗೆ ಕೃಷಿ ನಿರ್ವಹಣೆ ಮತ್ತು ಮಾರುಕಟ್ಟೆ ಕುರಿತು ವಿಶೇಷ ತರಬೇತಿ ಕಾರ್ಯಕ್ರಮ ಜೂನ್ 14ರಂದು ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿಂದೂ ಎಕನಾಮಿಕ್ ಫೋರಂ ಪುತ್ತೂರು ಘಟಕದ ಅಧ್ಯಕ್ಷರಾದ ಶ್ರೀ ಮೋಹನ ಕೆ ವಹಿಸಿದ್ದರು. ಅವರು ಪ್ರಾಸ್ತಾವಿಕ ಭಾಷಣದೊಂದಿಗೆ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿ, ಭಾಗವಹಿಸಿದವರನ್ನು ಸ್ವಾಗತಿಸಿದರು.
ಕಾರ್ಯಕ್ರಮವನ್ನು ಮಲ್ಲಿಗೆ ಕೃಷಿ ತರಬೇತಿಯ ಸಂಪನ್ಮೂಲ ವ್ಯಕ್ತಿ ಶ್ರೀ ರಾಮಕೃಷ್ಣ ಶರ್ಮ ಶಂಕರಪುರ ಉದ್ಘಾಟಿಸಿದರು. ಬಳಿಕ ಅವರು ಮಲ್ಲಿಗೆ ಕೃಷಿಯ ವೈಜ್ಞಾನಿಕ ನಿರ್ವಹಣೆ, ರೋಗ-ಕೀಟ ನಿಯಂತ್ರಣ, ಉತ್ಪಾದನೆ ಹೆಚ್ಚಿಸುವ ವಿಧಾನಗಳು ಹಾಗೂ ಮಾರುಕಟ್ಟೆ ಅವಕಾಶಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀಮತಿ ಕೃಷ್ಣವೇಣಿ ಮುಳಿಯ ಅವರು ಮಲ್ಲಿಗೆ ಕೃಷಿಯು ಸ್ವಾವಲಂಬಿ ಜೀವನ ನಿರ್ಮಾಣಕ್ಕೆ ಹೇಗೆ ಸಹಕಾರಿಯಾಗುತ್ತದೆ ಎಂಬುದನ್ನು ವಿವರಿಸಿದರು. ಜೊತೆಗೆ ಹಿಂದೂ ಎಕನಾಮಿಕ್ ಫೋರಂ ಮಹಿಳಾ ಘಟಕದ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಹಿಂದೂ ಎಕನಾಮಿಕ್ ಫೋರಂನ ಸ್ಥಾಪಕಾಧ್ಯಕ್ಷ ಕೃಷ್ಣ ಮೋಹನ್ ಅವರು ಅತಿಥಿಗಳನ್ನು ಪರಿಚಯಿಸಿದರು. ವೇದಿಕೆಯಲ್ಲಿ ಮಹಿಳಾ ಘಟಕದ ಉಪಾಧ್ಯಕ್ಷೆ ಉಮಾ ಡಿ ಪ್ರಸನ್ನ, ಕಾರ್ಯದರ್ಶಿ ಆಶಾ ಮುತ್ಲಾಜೆ ಹಾಗೂ ಹಿಂದೂ ಎಕನಾಮಿಕ್ ಫೋರಂ ಕಾರ್ಯದರ್ಶಿ ಅನೂಪ್ ಕೆ.ಜೆ. ಉಪಸ್ಥಿತರಿದ್ದರು.
ಸುಮಾರು 120 ಮಂದಿ ಅಭ್ಯರ್ಥಿಗಳು ತರಬೇತಿಯಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆದುಕೊಂಡರು. ಕಾರ್ಯಕ್ರಮದ ಕೊನೆಯಲ್ಲಿ ಕಾರ್ಯದರ್ಶಿ ಅನೂಪ್ ಕೆ.ಜೆ. ವಂದನಾರ್ಪಣೆ ಸಲ್ಲಿಸಿದರು.
ಮಲ್ಲಿಗೆ ಕೃಷಿಯ ಸಮಗ್ರ ನಿರ್ವಹಣೆ ಹಾಗೂ ಮಾರುಕಟ್ಟೆ ಕುರಿತು ರೈತರಿಗೆ ಮತ್ತು ಆಸಕ್ತರಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸಿದ ಈ ತರಬೇತಿ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು.


























