ಮಂಗಳೂರು: ಜೋಕಟ್ಟೆ ಅರಿಕೆರೆ ಪ್ರದೇಶದಲ್ಲಿ ಪತ್ತೆಯಾಗಿದ್ದ ವ್ಯಕ್ತಿಯ ಕೊಲೆ ಪ್ರಕರಣವನ್ನು ಪಣಂಬೂರು ಪೊಲೀಸರು ಅತೀ ಶೀಘ್ರದಲ್ಲಿ ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಜೂನ್ 10ರಂದು ಬೆಳಿಗ್ಗೆ ಜೋಕಟ್ಟೆ ಸಮೀಪದ MSEZಗೆ ಸೇರಿದ ನೀರು ಹರಿಯುವ ತೋಡಿನಲ್ಲಿ ಸುಮಾರು 35-40 ವರ್ಷದ ಅಪರಿಚಿತ ವ್ಯಕ್ತಿಯ ಮೃತದೇಹ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.
ತನಿಖೆ ವೇಳೆ ಮೃತನನ್ನು ಬಿಹಾರ ಮೂಲದ 39 ವರ್ಷದ ಚಂದನ್ ಚೌಹಾನ್ ಎಂದು ಗುರುತಿಸಲಾಯಿತು. ಪ್ರಕರಣದ ಪ್ರಮುಖ ಆರೋಪಿ ಪ್ರಶಾಂತ್ ಕುಮಾರ್ (36)ನನ್ನು ಜೂನ್ 13ರಂದು ಗೋವಾದ ಮಡಗಾಂವ್ ರೈಲು ನಿಲ್ದಾಣದಲ್ಲಿ ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿ ಪಿಂಕೂ ಮಹ್ತೋ (33)ನನ್ನು ಜೋಕಟ್ಟೆಯಲ್ಲಿ ವಶಕ್ಕೆ ಪಡೆಯಲಾಗಿದೆ.
ಪೊಲೀಸರ ಪ್ರಕಾರ, ಆರೋಪಿ ಪ್ರಶಾಂತ್ ಕುಮಾರ್‌ನ ಪತ್ನಿ ಕಳೆದ ಏಪ್ರಿಲ್‌ನಲ್ಲಿ ಮತ್ತೊಬ್ಬ ಯುವಕನೊಂದಿಗೆ ಮನೆ ಬಿಟ್ಟು ಹೋಗಿದ್ದಳು. ಈ ಘಟನೆಗೆ ಮೃತ ಚಂದನ್ ಚೌಹಾನ್ ಸಹಾಯ ಮಾಡಿದ್ದಾನೆ ಎಂಬ ಅನುಮಾನ ಹಾಗೂ ತನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾನೆ ಎಂಬ ಸಿಟ್ಟಿನಿಂದ ಪ್ರಶಾಂತ್ ತನ್ನ ಸ್ನೇಹಿತ ಪಿಂಕೂ ಮಹ್ತೋ ಜೊತೆ ಸೇರಿ ಜೂನ್ 9ರಂದು ಚಂದನ್ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿ, ಬಳಿಕ ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾನೆ. ನಂತರ ಮೃತದೇಹವನ್ನು ಜೋಕಟ್ಟೆಯಲ್ಲಿರುವ ತೋಡಿನಲ್ಲಿ ಎಸೆದಿರುವುದಾಗಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಮಂಗಳೂರು ಉತ್ತರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀಕಾಂತ್ ಕೆ. ಅವರ ಮಾರ್ಗದರ್ಶನದಲ್ಲಿ ಪಣಂಬೂರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಲೀಂ ಅಬ್ಬಾಸ್ ನೇತೃತ್ವದ ತಂಡ ಪ್ರಕರಣವನ್ನು ಭೇದಿಸಿದೆ. ಉಪನಿರೀಕ್ಷಕರಾದ ಶ್ರೀಕಲಾ ಕೆ.ಟಿ., ಜ್ಞಾನಶೇಖರ ಹಾಗೂ ಸಿಬ್ಬಂದಿಗಳಾದ ಇಮ್ತಿಯಾಝ್, ಸುರೇಂದ್ರ, ಚೆರಿಯನ್, ದೀಪಕ್, ಫಕ್ಕಿರೇಶ್, ರಾಕೇಶ್ ಮತ್ತು ಮಂಜುನಾಥ್ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.


























