ವಿಟ್ಲ: ವಿಟ್ಲ ಪಟ್ಟಣ ಪಂಚಾಯಿತಿ ನಿರ್ಣಯದಂತೆ ವಿಟ್ಲ ಪೇಟೆಗೆ ಆಗಮಿಸುವ ಜನರ ಕೋವಿಡ್ ಪರೀಕ್ಷೆಯ ಎರಡನೇ ವರದಿ ಬಂದಿದ್ದು, ಎರಡನೇ ದಿನ ಪರೀಕ್ಷೆಗೊಳಪಟ್ಟ 132 ಮಂದಿಯಲ್ಲಿ ಎಲ್ಲವೂ ನೆಗೆಟಿವ್ ವರದಿ ಬಂದಿದೆ.
ವಿಟ್ಲದಲ್ಲಿ ವ್ಯಾಪಕವಾಗಿ ಕೊರೊನಾ ಸೋಂಕು ಹರಡುತ್ತಿದ್ದು, ಅವುಗಳನ್ನು ನಿಯಂತ್ರಿಸಲು ಪೇಟೆಗೆ ಬರುವ ಪ್ರತಿಯೊಬ್ಬರನ್ನು ಪರೀಕ್ಷೆಗೊಳಪಡಿಸಬೇಕೆಂದು ಹಾಗೂ ಶನಿವಾರ ಮತ್ತು ಭಾನುವಾರ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲು ಪಟ್ಟಣ ಪಂಚಾಯಿತಿ ನಿರ್ಣಯ ಕೈಗೊಂಡಿತ್ತು.
ವಿಟ್ಲ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣ, ನಾಡಕಚೇರಿ, ಮೇಗಿನಪೇಟೆ ಮೂರು ಕಡೆಗಳಲ್ಲಿ ವಿಟ್ಲ ಸಮುದಾಯ ಆರೋಗ್ಯದ ಕೇಂದ್ರದ ಮತ್ತು ಅಳಿಕೆಯ ಸಿಬ್ಬಂದಿಗಳು ಕೋವಿಡ್ ಪರೀಕ್ಷೆ ನಡೆಸಿದ್ದರು.
ಪ್ರಥಮ ದಿನ ಗುರುವಾರ ವಿಟ್ಲ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಕಾಸರಗೋಡು ರಸ್ತೆ ಮೂಲಕ ಪೇಟೆಗೆ ಬರುವ ಒಟ್ಟು ೮೦ ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿತ್ತು. ಅದು ಎಲ್ಲವೂ ನೆಗೆಟಿವ್ ಬಂದಿತ್ತು.
ಶುಕ್ರವಾರ ೧೩೨ ಮಂದಿ ಪರೀಕ್ಷೆ ನಡೆಸಲಾಗಿತ್ತು. ಎಲ್ಲವೂ ನೆಗೆಟಿವ್ ವರದಿ ಬಂದಿದೆ. ಒಟ್ಟು ನಡೆಸಲಾದ ೨೧೨ ಮಂದಿಯ ಸ್ಲ್ಯಾಬ್ ಪರೀಕ್ಷೆಯಲ್ಲಿ ಎಲ್ಲವೂ ನೆಗೆಟಿವ್ ಬಂದಿದೆ.