ಕುಂಬ್ರದಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದ ಡಾ. ವಿಘ್ನೇಶ್ವರ ಭಟ್ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಅವರ ಚಿಕಿತ್ಸೆಗೆ ಪಾಣಾಜೆ ಹವ್ಯಕ ಸಂಘದ ವತಿಯಿಂದ ಆರ್ಥಿಕ ನೆರವು ಹಸ್ತಾಂತರಿಸಲಾಯಿತು. ಸುಮಾರು 65 ಮನೆಗಳ ಸಹಕಾರದೊಂದಿಗೆ ಒಟ್ಟು ₹1,01,700 ಸಂಗ್ರಹಿಸಿ ನೆರವು ನೀಡಲಾಗಿದ್ದು, ಮುಂದೆಯೂ ಅವರೊಂದಿಗೆ ನಿಲ್ಲುವುದಾಗಿ ಸಂಘದ ಸದಸ್ಯರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಾಣಾಜೆ ಹವ್ಯಕ ಸಂಘದ ನಾರಾಯಣ ಪ್ರಕಾಶ್ “ಡಾ. ವಿಘ್ನೇಶ್ವರ ಭಟ್ ಒಬ್ಬ ಉತ್ತಮ ವೈದ್ಯರಾಗಿದ್ದು, ಅವರಿಗೆ ಬಂದ ಸಂಕಷ್ಟ ಎಲ್ಲರಿಗೂ ಸಂಬಂಧಪಟ್ಟದ್ದು ಎಂಬ ನಿಟ್ಟಿನಲ್ಲಿ 65 ಮನೆಗಳ ಸಹಕಾರದೊಂದಿಗೆ ಹಣ ಸಂಗ್ರಹಿಸಿ ನೆರವು ನೀಡಲಾಗಿದೆ. ಮುಂದೆಯೂ ಅವರ ಚಿಕಿತ್ಸೆಗೆ ಸಹಕಾರ ನೀಡಲಾಗುತ್ತದೆ” ಎಂದು ಹೇಳಿದರು.
ಮಹಾಬಲೇಶ್ವರ ಭಟ್ ಗಿಳಿಯಾಲು ಮಾತನಾಡಿ, “ಒಬ್ಬ ಉತ್ತಮ ವೈದ್ಯರಾಗಿ ಅವರು ನೀಡಿರುವ ಸೇವೆಯನ್ನು ನಾನು ಸ್ವಯಂ ಅನುಭವಿಸಿದ್ದೇನೆ. ನನ್ನಿಂದ ಸಾಧ್ಯವಾದ ನೆರವು ಈಗಾಗಲೇ ನೀಡಿದ್ದು, ಮುಂದೆಯೂ ಸಹಕಾರ ಮುಂದುವರಿಯಲಿದೆ” ಎಂದರು.
ಡಾ. ಅಖಿಲೇಶ್ ಮಾತನಾಡಿ, ಕ್ಯಾನ್ಸರ್ ಸೇರಿದಂತೆ ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಹೆಚ್ಚಿನ ವೆಚ್ಚ ಅಗತ್ಯವಾಗುತ್ತದೆ. ಸಂಕಷ್ಟದ ಸಂದರ್ಭದಲ್ಲಿ ಸಹಾಯ ಕೇಳುವುದು ಸಹಜವಾಗಿದ್ದು, ಅದಕ್ಕೆ ಸ್ಪಂದಿಸುವುದು ಮಾನವ ಧರ್ಮವಾಗಿದೆ. ಸಮಾಜದಿಂದ ಪಡೆದನ್ನು ಸಮಾಜಕ್ಕೆ ಮರಳಿ ನೀಡುವ ಕಾರ್ಯವಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಭಟ್ ಕೆದುವಾರು, ಕೃಷ್ಣ ಪ್ರಕಾಶ್ ಅರ್ಧಮೂಲೆ, ಗೋಪಾಲಕೃಷ್ಣ ಭಟ್ ನೆಲ್ಲಿತ್ತಿಮಾರ್, ಶ್ರೀನಿವಾಸ್ ತೂಂಬಡ್ಕ, ಭರತ್ ಭರಣ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.


























