ಸುಳ್ಯ : ನಾಗಪಟ್ಟಣ ಕಿಂಡಿ ಅಣೆಕಟ್ಟಿನ ಎಲ್ಲಾ ಗೇಟುಗಳನ್ನು ಸಣ್ಣ ನೀರಾವರಿ ಇಲಾಖೆ ತೆರವುಗೊಳಿಸಿದ್ದು ಇದರ ಪರಿಣಾಮ ಕಲ್ಲುಮುಟ್ಟು ಜಾಕ್‌ವೆಲ್ ಘಟಕಕ್ಕೆ ನೀರಿನ ಕೊರತೆ ಉಂಟಾಗಿದೆ. ಕಳೆದ ಎರಡು ದಿನಗಳಿಂದ ನಗರದಲ್ಲಿ ನೀರು ಪೂರೈಕೆಯ ಕೊರತೆ ಉಂಟಾಗಿದ್ದು ಈ ಹಿನ್ನೆಲೆಯಲ್ಲಿ ಅಣೆಕಟ್ಟು ಸ್ಥಳಕ್ಕೆ ಸೋಮವಾರ ಕಾಂಗ್ರೆಸ್ ನಿಯೋಗ ಭೇಟಿ ನೀಡಿದ್ದು ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದೆ.
ಪಯಸ್ವಿನಿ ನದಿಯಲ್ಲಿ ಕಳೆದ ಕೆಲವು ದಿನಗಳಿಂದ ನೀರಿನ ಹರಿವು ಹೆಚ್ಚಾಗುತ್ತಿದ್ದು ನಾಗಪಟ್ಟಣಕಿಂಡಿ ಅಣೆಕಟ್ಟಿನ ಮೇಲ್ಬಾಗದಲ್ಲೂ ನೀರಿನ ಮಟ್ಟ ಏರಿಕೆಯಾಗಿತ್ತು. ಅಣೆಕಟ್ಟಿನ ಪರಿಣಾಮ ಮೇಲ್ಬಾಗದ ಪ್ರದೇಶದಲ್ಲಿ ನೀರು ನಿಂತು ನಿವಾಸಿಯೊಬ್ಬರ ತೋಟಕ್ಕೆ ನೀರು ನುಗ್ಗಿರುವ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತರಲಾಗಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತದ ಸೂಚನೆಯ ಮೇರೆಗೆ ಸಣ್ಣ ನೀರಾಮ ಇಲಾಖೆ ಆಣೆಕಟ್ಟಿನ ಎಲ್ಲ ಗೇಟುಗಳನ್ನು ತೆರವುಗೊಳಿಸಿತ್ತು.
ಗೇಟುಗಳನ್ನು ತೆರವುಗೊಳಿಸಿದ ಬಳಿಕ ನೀರು ಸರಾಗವಾಗಿ ಹರಿದುಹೋಗಿದ್ದು ಅಣೆಕಟ್ಟಿನ ಬಹುತೇಕ ಭಾಗ ಬರಿದಾದಂತಾಗಿದೆ. ಅಣೆಕಟ್ಟಿನ ನೀರನ್ನೇ ಅವಲಂಬಿಸಿರುವ ಕಲ್ಲುಮುಟ್ಟು ಜಾಕ್ವೆಲ್ ಗೆ ಅಗತ್ಯ ಪ್ರಮಾಣದ ನೀರು ದೊರೆಯದೆ ಕುಡಿಯುವ ನೀರಿನ ಪೂರೈಕೆ ಇಲ್ಲದೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸ್ಥಳ ಪರಿಶೀಲನೆ ನಡೆಸದೆ ಏಕಾಏಕ ಗೇಟು ತೆರವುಗೊಳಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಗರ ಪಂಚಾಯತ್ ಮಾಜಿ ಸದಸ್ಯ ಎಂ. ವೆಂಕಪ್ಪ ಗೌಡ ಮಾತನಾಡಿ, ಸುಮಾರು 30 ಸಾವಿರಕ್ಕೂ ಅಧಿಕ ಜನಸಂಖ್ಯೆಗೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ವೆಂಟೆಡ್ ಡ್ಯಾಂ ನಿರ್ಮಿಸಲಾಗಿದೆ. ಆದರೆ, ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಸ್ಥಳ ಪರಿಶೀಲನೆ ನಡೆಸದೆ ಗೇಟುಗಳನ್ನು ಏಕಾಏಕಿ ತೆರವುಗೊಳಿಸಿರುವುದು ಸರಿಯಲ್ಲ ಇದರಿಂದ ನಗರಕ್ಕೆ ಕುಡಿಯುವ ನೀರಿನ ಕೊರತೆ ಉಂಟಾಗಿದೆ. ಅಧಿಕಾರಿಗಳು ವಾಸ್ತವ ಸ್ಥಿತಿಯನ್ನು ಸಮರ್ಪಕವಾಗಿ ಅರಿತಿಲ್ಲ. ಕಳೆದ ಎರಡು ದಿನಗಳಿಂದಲೇ ನೀರಿನ ಅಭಾವ ಕಂಡುಬರುತ್ತಿದೆ. ಜಾಕ್ ವೆಲ್ ಪ್ರದೇಶದಲ್ಲಿ ಹೂಳು ತೆರವು ಕಾರ್ಯ ನಡೆಯುತ್ತಿದ್ದು, ನೀರಿನ ಹರಿವು ಕೆಂಬಣ್ಣಕ್ಕೆ ತಿರುಗಿದೆ. ಪರಿಸ್ಥಿತಿಯನ್ನು ಅವಲೋಕಿಸಿ ಅಣೆಕಟ್ಟಿನ ಗೇಟುಗಳನ್ನು ಮರು ಅಳವಡಿಸಬೇಕು ಎಂದು ಆಗ್ರಹಿಸಿದರು.
ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳೂರು ಮಾತನಾಡಿ, ಕಳೆದ ವರ್ಷವೂ ಸಾರ್ವಜನಿಕರ ಆಗ್ರಹದ ಮೇರೆಗೆ ಜುಲೈ ತಿಂಗಳವರೆಗೆ ಡ್ಯಾಂ ಗೇಟುಗಳನ್ನು ಉಳಿಸಿಕೊಳ್ಳಲಾಗಿತ್ತು. ಆದರೆ, ಈ ಬಾರಿ ಜೂನ್ ತಿಂಗಳಲ್ಲಿ ಗೇಟುಗಳನ್ನು ತೆರವುಗೊಳಿಸಲಾಗಿದೆ ಅಧಿಕಾರಿಗಳು ಸ್ಥಳದ ನೈಜ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳದೆ ನಿರ್ಧಾರ ಕೈಗೊಂಡಿದ್ದಾರೆ. ಹೂಳು ತೆರವುಗೊಳಿಸಿದ ಬಳಿಕವೂ ನೀರಿನ ಸಮಸ್ಯೆ ಮುಂದುರಿದರೆ ಗೇಟುಗಳನ್ನು ಮರು ಅಳವಡಿಸಬೇಕು ಎಂದು ಒತ್ತಾಯಿಸಿದರು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭವಾನಿಶಂಕರ ಕಲ್ಮಡ್ಯ ಕಾಂಗ್ರೆಸ್ ಮುಖಂ ವರಾದ ಸತ್ಯಕುಮಾರ್ ಅಡಿಂಜೆ, ಡೇವಿಡ್ ಧೀರಾ ಕ್ರಾಸ್ತಾ , ಶಿವಕುಮಾರ್ ಕಂದದ್ರ ಮಂಜುನಾಥ ಮಡ್ತಿಲ, ರಕ್ಷಿತ್ ದೊಡ್ಡಡ್ಕ ಪ್ರೇಮಾ ಹರೀಶ್ವರನ್ ಗಾಂಧಿ, ಶಹೀದ್ ವಾರೆ, ರಾಜು ಪಂಡಿತ್ ಉಪಸ್ಥಿತರಿದ್ದರು.
ಹೂಳು ತೆರವು ಕಾರ್ಯಾಚರಣೆ
ಈ ನಡುವೆ ಜಾಕ್‌ವೆಲ್ ಭಾಗದಲ್ಲಿ ನೀರಿನ ಹರಿವಿಗೆ ತೊಂದರೆ ಉಂಟಾಗಿರುವ ಹಿನ್ನೆಲೆಯಲ್ಲಿ ಹೂಳು ತೆರವು ಕಾರ್ಯವನ್ನು ದಿನವಿಡೀ ಮುಂದುವರಿಸಲಾಗುತ್ತಿದೆ. ಹಿಟಾ ಚಿ ಯಂತ್ರ ಬಳಸಿ ಹೂಳು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಜಾಕ್ ವೆಲ್ ಭಾಗದಲ್ಲಿ ನೀರಿನ ಹರಿವಿ ನೊಂದಿಗೆ ಹೆಚ್ಚಿನ ಪ್ರಮಾಣದ ಕೆಸರು ಮಿಶ್ರಿತ ನೀರು ಹರಿದುಬರುತ್ತಿದ್ದು ಶುದ್ದ ನೀರಿನ ಲಭ್ಯತೆ ಕುಂಠಿತವಾಗಿದೆ. ಇದರಿಂದ ಕುಡಿಯುವ ನೀರಿನ ಪೂರೈಕೆ ಪ್ರಕ್ರಿಯೆಗೆ ತಾತ್ಕಾಲಿಕ ತೊಂದರೆ ಉಂಟಾಗುವ ಸಾಧ್ಯತೆ ಇದೆ.


























