ಪುತ್ತೂರು: ವಿಜಯಸಾಮ್ರಾಟ್ (ರಿ.) ಪುತ್ತೂರು ಸಂಸ್ಥೆಯ ನಾಲ್ಕನೇ ಮಹತ್ವಾಕಾಂಕ್ಷಿ ಯೋಜನೆಯಾದ ‘ಮನೆ ಹಸ್ತಾಂತರ ಕಾರ್ಯಕ್ರಮ’ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಬಪ್ಪಳಿಗೆ ಸಮೀಪದ ಬಡ ಹಾಗೂ ಅಂಗವೈಕಲ್ಯ ಹೊಂದಿರುವ ಶ್ರೀ ಅಶೋಕ್ ಅವರ ಕುಟುಂಬಕ್ಕೆ ನೂತನ ಮನೆ ಹಸ್ತಾಂತರಿಸಲಾಗುತ್ತಿದೆ.
ಶ್ರೀ ಅಶೋಕ್ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಶಿಥಿಲಾವಸ್ಥೆಯಲ್ಲಿದ್ದ ಮನೆಯಲ್ಲಿ ವಾಸಿಸುತ್ತಿದ್ದರು. ಮನೆ ಕುಸಿಯುವ ಹಂತದಲ್ಲಿದ್ದ ಪರಿಸ್ಥಿತಿಯನ್ನು ಗಮನಿಸಿದ ವಿಜಯಸಾಮ್ರಾಟ್ ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ಶ್ರೀ ಸಹಜ್ ರೈ ಬಳಜ್ಜ ಅವರ ನೇತೃತ್ವದಲ್ಲಿ ಸಂಸ್ಥೆಯ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ, ನೂತನ ಮನೆ ನಿರ್ಮಾಣದ ಯೋಜನೆಯನ್ನು ಕೈಗೆತ್ತಿಕೊಂಡಿದ್ದರು.
2026ರ ಮೇ 1ರಂದು ಆರಂಭಗೊಂಡ ಮನೆ ನಿರ್ಮಾಣ ಹಾಗೂ ದುರಸ್ತಿ ಕಾಮಗಾರಿ ಇದೀಗ ಪೂರ್ಣಗೊಂಡಿದ್ದು, ಮನೆ ಹಸ್ತಾಂತರ ಕಾರ್ಯಕ್ರಮವು ಜೂನ್ 28ರಂದು (ಭಾನುವಾರ) ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 9.00 ಗಂಟೆಗೆ ಪುರೋಹಿತರ ನೇತೃತ್ವದಲ್ಲಿ ಗಣಪತಿ ಹವನ ನಡೆಯಲಿದ್ದು, ಬಳಿಕ ಬೆಳಿಗ್ಗೆ 10.00 ಗಂಟೆಗೆ ನೂತನ ಗೃಹವನ್ನು ಫಲಾನುಭವಿ ಶ್ರೀ ಅಶೋಕ್ ಅವರ ಕುಟುಂಬಕ್ಕೆ ಅಧಿಕೃತವಾಗಿ ಹಸ್ತಾಂತರಿಸಲಾಗುತ್ತದೆ.
ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು, ದಾನಿಗಳು ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿಜಯಸಾಮ್ರಾಟ್ (ರಿ.) ಪುತ್ತೂರು ಸಂಸ್ಥೆಯ ಸ್ಥಾಪಕಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಮನವಿ ಮಾಡಿದ್ದಾರೆ.



























