ಪುತ್ತೂರು:ಓವರ್ ಟೇಕ್ ವಿಚಾರವಾಗಿ ಪಿಕಪ್ ವಾಹನ ಚಾಲಕ ಕಾರಿನಲ್ಲಿದ್ದ ಇಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆಯೊಡ್ಡಿರುವುದಾಗಿ ಆರೋಪಿಸಿರುವ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಸರಗೋಡು ಕಲ್ನಾಡು ನಿವಾಸಿ ಪ್ರಸನ್ನ ಕುಮಾರ್ ಮತ್ತು ಅವರ ಸಹೋದರ ಸುಜೀತ್ ಎಂಬವರು ಆಲ್ಟೋ ಕಾರಿನಲ್ಲಿ ಸುಬ್ರಹ್ಮಣ್ಯ ಕಡೆಗೆ ಬರುತ್ತಿದ್ದ ವೇಳೆ ನೆಟ್ಟಣಿಗೆ ಮುಡ್ನೂರು ಗಾಳಿಮುಖದಲ್ಲಿ ಇಕ್ಕಟ್ಟಾದ ರಸ್ತೆಯಲ್ಲಿ ಹಿಂದಿನಿಂದ ಬಂದ ಪಿಕಪ್ ವಾಹನ ಚಾಲಕ ಓವರಟೇಕ್ ಮಾಡಲು ಪ್ರಯತ್ನಿಸಿದಾಗ ಕಾರು ಚಾಲಕ ಪ್ರಸನ್ನ ಕುಮಾರ್ ಅವರು ನಿಧಾನವಾಗಿ ಹೋಗುವಂತೆ ಪಿಕಪ್ ಚಾಲಕನಿಗೆ ತಿಳಿಸಿದ್ದರು.
ಇದೇ ವಿಚಾರವಾಗಿ ಸ್ವಲ್ಪ ಮುಂದೆ ಹೋಗಿ ಪಿಕಪ್ ವಾಹನವನ್ನು ಕಾರಿಗೆ ಅಡ್ಡವಾಗಿಟ್ಟು ಅದರ ಚಾಲಕ ಮತ್ತು ಇನ್ನೋರ್ವ, ಕಾರಿನಲ್ಲಿದ್ದ ವ್ಯಕ್ತಿ ಪ್ರಸನ್ನ ಕುಮಾರ್ ಮತ್ತು ಸುಜೀತ್ ಅವರಿಗೆ ಅವಾಚ್ಯವಾಗಿ ನಿಂದಿಸಿ ಕೈಯಿಂದ ದೂಡಿ ಹಾಕಿ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆ ಕುರಿತು ಕಾರು ಚಾಲಕ ಪ್ರಸನ್ನ ಕುಮಾರ್ ಅವರು ನೀಡಿದ ದೂರಿನಂತೆ ಪಿಕಪ್ ವಾಹನ ಚಾಲಕ ಹನೀಫ್ ಮತ್ತು ಮಹಮ್ಮದ್ ನಿಯಾಝ್ ಎಂಬೀರ್ವರ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



























