ಪುತ್ತೂರು: ನೆಹರುನಗರ ಸಮೀಪದ ಕಲ್ಲೇಗದಲ್ಲಿರುವ ನವೀಕೃತ ಅಶ್ವಿನಿ ಕಾಂಪ್ಲೆಕ್ಸ್ ಕಟ್ಟಡವು ಇಂದು (ಜೂನ್ 29) ಲೋಕಾರ್ಪಣೆಗೊಳ್ಳಲಿದೆ. ಸಂಜೆ 4:30ಕ್ಕೆ ನಡೆಯುವ ಉದ್ಘಾಟನಾ ಸಮಾರಂಭವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ನೆರವೇರಿಸಲಿದ್ದು, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತೂರು ನಗರಸಭೆಯ ಮಾಜಿ ಅಧ್ಯಕ್ಷ ಜೀವಂಧರ್ ಜೈನ್, ಕಲ್ಲೇಗ ಶ್ರೀ ಕಲ್ಲುರ್ಟಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಜಿತ್ ಕುಮಾರ್ ಜೈನ್ ಹಾಗೂ ಕಲ್ಲೇಗ ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್ ಅಧ್ಯಕ್ಷ ಸಂಜೀವ ನಾಯಕ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಉದ್ಘಾಟನಾ ಸಮಾರಂಭದ ಅಂಗವಾಗಿ ಸಂಜೆ 7 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಕರಾವಳಿಯ ಜನಪ್ರಿಯ ತಂಡ ‘ಚಾ ಪರ್ಕ ಕಲಾವಿದೆರ್ ಕುಡ್ಲ’ ಅಭಿನಯಿಸುವ ‘ಯಾನೊರಿ ಬರೊಲಿಯಾ’ ತುಳು ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ. ಕಾಪಿಕಾಡ್, ವಾಮಂಜೂರು ಹಾಗೂ ಸಾಯಿಕೃಷ್ಣ ಅವರ ಅಭಿನಯದ ಈ ನಾಟಕ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ನೀಡಲಿದೆ.
ಅಶ್ವಿನಿ ಕಾಂಪ್ಲೆಕ್ಸ್‌ನ ಮಾಲೀಕರಾದ ಕೆ. ರಾಜರಾಮ ಪ್ರಭು ಅವರು ಸಾರ್ವಜನಿಕರು ಹಾಗೂ ಕಲಾಭಿಮಾನಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸುವಂತೆ ಆಹ್ವಾನಿಸಿದ್ದಾರೆ.



























