ಮಂಗಳೂರು, ಜು. 4: ಡಿಜಿಟಲ್ ಅರೆಸ್ಟ್ (ಸೈಬರ್ ವಂಚನೆ) ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಬ್ಯಾಂಕ್ ಖಾತೆಗಳನ್ನು ಪಡೆದು ಸೈಬರ್ ವಂಚನೆಯ ಹಣದ ವಹಿವಾಟಿಗೆ ಸಹಕರಿಸುತ್ತಿದ್ದ ಆರೋಪದಡಿ ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಅಪರಾಧ ಪೊಲೀಸ್ ಠಾಣೆ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತನನ್ನು ಕೊಳ್ನಾಡು ಕುಡ್ತಮುಗೇರು ನಿವಾಸಿ ಜುಬೈರ್ (32) ಎಂದು ಗುರುತಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅಪರಾಧ ಸಂಖ್ಯೆ 104/2025ರ ಪ್ರಕರಣದ ತನಿಖೆಯ ಭಾಗವಾಗಿ ಆರೋಪಿಯನ್ನು ಜುಲೈ 3ರಂದು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಬಳಿಕ ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಪೊಲೀಸರ ಮಾಹಿತಿ ಪ್ರಕಾರ, ವಿಚಾರಣೆ ವೇಳೆ ಆರೋಪಿಯ ವಿರುದ್ಧ ವಿಟ್ಲ ಪೊಲೀಸ್ ಠಾಣೆಯ 2022ರ ಒಂದು ಪ್ರಕರಣ ಸೇರಿದಂತೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಹಾಗೂ ಬಂಧನದಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದಾನೆ ಎಂಬ ಮಾಹಿತಿಯೂ ತನಿಖೆಯಲ್ಲಿ ತಿಳಿದುಬಂದಿದೆ.
ಪ್ರಕರಣದ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಅಪರಾಧ ಪೊಲೀಸ್ ಠಾಣೆ ಹೆಚ್ಚಿನ ತನಿಖೆ ಮುಂದುವರಿಸಿದೆ.

























