ವಿಟ್ಲ: ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಮುಗುಳಿ ಪ್ರದೇಶದಲ್ಲಿ ನಡೆಯುತ್ತಿದ್ದ ಅಕ್ರಮ ಕೆಂಪುಕಲ್ಲು ಹಾಗೂ ಮಣ್ಣು ಗಣಿಗಾರಿಕೆ ಮೇಲೆ ವಿಟ್ಲ ಪೊಲೀಸರು ದಾಳಿ ನಡೆಸಿ, ಗಣಿಗಾರಿಕೆಗೆ ಬಳಸಲಾಗುತ್ತಿದ್ದ ವಾಹನಗಳು, ಯಂತ್ರೋಪಕರಣಗಳು ಹಾಗೂ ಇತರೆ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಜುಲೈ 2ರಂದು ಸಂಜೆ ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ರಾಮಕೃಷ್ಣ ಅವರಿಗೆ ಅಕ್ರಮ ಗಣಿಗಾರಿಕೆ ಕುರಿತು ದೊರೆತ ಖಚಿತ ಮಾಹಿತಿಯ ಮೇರೆಗೆ ಠಾಣಾ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿದಾಗ, ಪೊಲೀಸ್ ವಾಹನವನ್ನು ಕಂಡ ಗಣಿಗಾರಿಕೆಯಲ್ಲಿ ತೊಡಗಿದ್ದವರು ಸ್ಥಳದಿಂದ ಪರಾರಿಯಾಗಿದ್ದಾರೆ.
ಪರಿಶೀಲನೆ ವೇಳೆ ಯಾವುದೇ ಪರವಾನಗಿ ಇಲ್ಲದೆ ಕೆಂಪುಕಲ್ಲು ಗಣಿಗಾರಿಕೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಸಮೀಪದಲ್ಲೇ ಅಕ್ರಮ ಮಣ್ಣು ಗಣಿಗಾರಿಕೆ ನಡೆಯುತ್ತಿದ್ದು, ಮಣ್ಣು ಸಾಗಿಸುವ ಲಾರಿಗಳ ತೂಕಕ್ಕಾಗಿ ನಿರ್ಮಿಸಿದ್ದ ವೇ ಬ್ರಿಡ್ಜ್, ಕಟ್ಟಡ ಹಾಗೂ ಗಣಿಗಾರಿಕೆಗೆ ಬಳಸಲಾಗುತ್ತಿದ್ದ ಯಂತ್ರೋಪಕರಣಗಳನ್ನೂ ಪೊಲೀಸರು ಪತ್ತೆಹಚ್ಚಿದ್ದಾರೆ.
ಸ್ಥಳದಲ್ಲಿದ್ದ ವಾಹನಗಳು, ಯಂತ್ರೋಪಕರಣಗಳು ಹಾಗೂ ಇತರೆ ಸೊತ್ತುಗಳನ್ನು ಪೊಲೀಸರು ಮುಂದಿನ ಕಾನೂನು ಕ್ರಮಕ್ಕಾಗಿ ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಮುಳಿಗದ್ದೆ ಝಕಾರಿಯಾ ಹಾಗೂ ಇತರರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 148/2026 ದಾಖಲಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) 2023ರ ಕಲಂ 303(2), ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ, 1957ರ ಕಲಂ 4(1) ಹಾಗೂ 21 ಮತ್ತು ಕರ್ನಾಟಕ ಮೈನರ್ ಮಿನರಲ್ ಕನ್ಸೆಷನ್ ನಿಯಮಗಳು, 1994ರ ಕಲಂ 3 ಹಾಗೂ 44ರಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

























