ವರ್ಕ್ ಫ್ರಂ ಹೋಮ್ ಹೆಸರಿನಲ್ಲಿ ಜನರಿಂದ ಲಕ್ಷ ಲಕ್ಷ ಹಣ ಪಡೆದು ವಂಚಿಸಿದ್ದ ಖತರ್ನಾಕ್ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಿರಣ್ ಮತ್ತು ಪತ್ನಿ ಆರತಿ ಬಂಧಿತ ಆರೋಪಿಗಳು. ಇಬ್ಬರೂ ಸೇರಿಕೊಂಡು ಕಾಳಿಕಾ ದೇವಿ ಎಂಟರ್ ಪ್ರೈಸಸ್ ಹೆಸರಲ್ಲಿ ಜನರಿಗೆ ಕೋಟಿ ಕೋಟಿ ವಂಚನೆ ಮಾಡಿದ್ದರು. ಆರೋಪಿಗಳು ದೇವನಹಳ್ಳಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಸಾವಿರಾರು ಜನರಿಗೆ ಮನೆಗೆ ಕೆಲಸ ಕೊಡುವುದಾಗಿ ನಂಬಿಸಿ ವಂಚನೆ ಮಾಡಿದ್ದರು. ಇನ್‌ಸ್ಟಾಗ್ರಾಂನಲ್ಲಿ ವರ್ಕ್ ಫ್ರಂ ಹೋಮ್ ಕೆಲಸ ಕೊಡುವುದಾಗಿ ರೀಲ್ಸ್ ಮಾಡಿದ್ದರು. ಜನರಿಂದ ಲಕ್ಷ ಲಕ್ಷ ಹಣ ಡೆಪಾಸಿಟ್ ಮಾಡಿಸಿಕೊಂಡು ವಂಚಿಸಿ ತಲೆಮರೆಸಿಕೊಂಡಿದ್ದರು.
ಒಬ್ಬೊಬ್ಬರಿಂದ 2 ಲಕ್ಷದಿಂದ 20 ಲಕ್ಷದವರೆಗೂ ಹಣ ಡೆಪಾಸಿಟ್ ಮಾಡಿಸಿಕೊಂಡಿದ್ದರು. ಮೇಣದ ಬತ್ತಿ, ಡ್ರೈ ಫ್ರೂಟ್ಸ್, ಅಗರಬತ್ತಿ ಪ್ಯಾಕಿಂಗ್ ಕೆಲಸದ ಹೆಸರಲ್ಲಿ ಭಾರಿ ವಂಚನೆ ಎಸಗಿದ್ದರು. ಕಚ್ಚಾ ಪದಾರ್ಥಗಳ ಪ್ಯಾಕಿಂಗ್‌ಗೆ ಒಂದು ತಿಂಗಳಿಗೆ ಒಂದು ಲಕ್ಷ ಡೆಪಾಸಿಟ್ ಮಾಡಿದರೆ 23 ಸಾವಿರ ಹಣ ಕೊಡುವುದಾಗಿ ನಂಬಿಸಿದ್ದರು. ದಂಪತಿ ಮಾತು ನಂಬಿ ಜನರು ಸಾಲ ಸೂಲ ಮಾಡಿ ಲಕ್ಷ ಲಕ್ಷ ಹಣ ಡೆಪಾಸಿಟ್ ಮಾಡಿದ್ದರು.




























