ಮಂಗಳೂರು: ತಾಲೂಕಿನ ಕಾಟಿಪಳ್ಳ ಗ್ರಾಮದ 6ನೇ ಬ್ಲಾಕ್‌ನಲ್ಲಿ ಕಟ್ಟಡದ ಮೇಲೆ ಕಬ್ಬಿಣದ ಶೀಟ್ ಅಳವಡಿಸುವ ವೇಳೆ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ 65 ವರ್ಷದ ಕಾರ್ಮಿಕರೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಆಗಸ್ಟ್ 10ರಂದು ಸಂಜೆ ನಡೆದಿದೆ. ಮೃತರನ್ನು ಭಾಸ್ಕರ ಜಿ. ಕರ್ಕೆರ (65) ಎಂದು ಗುರುತಿಸಲಾಗಿದೆ.
ಕಾಟಿಪಳ್ಳ ಗ್ರಾಮದ 6ನೇ ಬ್ಲಾಕ್‌ನ ಜಿಮ್ ಇಕ್ಬಾಲ್ ಎಂಬವರಿಗೆ ಸಂಬಂಧಿಸಿದ ಕಟ್ಟಡದಲ್ಲಿ ಕಬ್ಬಿಣದ ಶೀಟ್ ಅಳವಡಿಸುವ ಕಾಮಗಾರಿ ನಡೆಯುತ್ತಿತ್ತು ಎನ್ನಲಾಗಿದೆ. ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರಿಗೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ, ಕೈಗಳಿಗೆ ಸುರಕ್ಷತಾ ಗೌಸ್‌ಗಳನ್ನು ನೀಡದೇ ಹಾಗೂ ಕಟ್ಟಡದ ಸಮೀಪದಲ್ಲಿದ್ದ ಹೈಟೆನ್ಷನ್ ವಿದ್ಯುತ್ ತಂತಿಗೆ ಯಾವುದೇ ಸುರಕ್ಷತಾ ಕವಚ ಅಳವಡಿಸದೆ ಕಾಮಗಾರಿ ನಡೆಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.
ಆಗಸ್ಟ್ 10ರಂದು ಸಂಜೆ ಸುಮಾರು 4 ಗಂಟೆಯ ವೇಳೆಗೆ ಭಾಸ್ಕರ ಜಿ. ಕರ್ಕೆರ ಅವರು ಕಟ್ಟಡದ ಮೇಲೆ ಕಬ್ಬಿಣದ ಶೀಟ್ ಅಳವಡಿಸುವ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಅವರ ಕೈಯಲ್ಲಿದ್ದ ಕಬ್ಬಿಣದ ಪೈಪ್ ಸಮೀಪದಲ್ಲಿದ್ದ ಹೈಟೆನ್ಷನ್ ವಿದ್ಯುತ್ ತಂತಿಗೆ ತಾಗಿದೆ ಎನ್ನಲಾಗಿದೆ. ಪರಿಣಾಮ ವಿದ್ಯುತ್ ಪ್ರವಹಿಸಿ ಭಾಸ್ಕರ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸುರಕ್ಷತಾ ಕ್ರಮಗಳ ನಿರ್ಲಕ್ಷ್ಯವೇ ದುರ್ಘಟನೆಗೆ ಕಾರಣವಾಗಿರಬಹುದೆಂಬ ಆರೋಪ ಕೇಳಿಬಂದಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.




























