ಕಾಂಗ್ರೆಸ್ನ ಯಾವ ಕಾರ್ಯಕ್ರಮದಲ್ಲೂ ನಾವು ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಹಾಡಲ್ಲ. ನಾವು ಹಾಡುವುದೇ ಎರಡು ಪ್ಯಾರಾ ಮಾತ್ರ. ನೇಣುಹಾಕಿ, ಜೈಲಿಗೆ ಹಾಕಿದರೂ ನಾವು ಹಾಡುವುದು ಅಷ್ಟು ಮಾತ್ರ ಎಂದು ನವದೆಹಲಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ. ವಂದೇ ಮಾತರಂ ಗೀತೆಗೆ ಕಾಂಗ್ರೆಸ್ ವರಿಷ್ಠರಿಂದಲೇ ಅಗೌರವ ಆರೋಪ ಸಂಬಂಧ ವಿಚಾರವಾಗಿಯೂ ಪ್ರತಿಕ್ರಿಯಿಸಿರುವ ಅವರು, ಸೋನಿಯಾ ಗಾಂಧಿ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ವಂದೇ ಮಾತರಂ ಹಾಡದಂತೆ ತಡೆದಿದ್ದಾರೆ ಎಂಬುದು ಸುಳ್ಳು. ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಕಚೇರಿಯಲ್ಲಿ ಹಾಡು ಹಾಡುವಾಗ ತಪ್ಪುಗಳಿದ್ದವು, ಅವುಗಳನ್ನು ಸರಿಪಡಿಸಿಕೊಳ್ಳಲು ಸೋನಿಯಾ ಗಾಂಧಿ ಸೂಚಿಸಿದ್ದರು. ಅಲ್ಲದೆ, ವಯಸ್ಸಿನ ಕಾರಣದಿಂದಾಗಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕುರ್ಚಿ ನೀಡುವಂತೆ ಅವರು ಮನವಿ ಮಾಡಿದ್ದರು ಎಂದು ಹರಿಪ್ರಸಾದ್ ತಿಳಿಸಿದ್ದಾರೆ.




























