ಹಾಸನ: ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಗಣಪತಿ ವಿಸರ್ಜನೆಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ ಅವರಿಗೆ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಕಠಿಣ ಪದಗಳನ್ನು ಬಳಸಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ಈ ಬೆಳವಣಿಗೆ ಜಿಲ್ಲಾ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಡಿಸಿ ನೋಟಿಸ್‌ನಲ್ಲೇನಿದೆ?
ಅಕ್ಟೋಬರ್ 3ರಂದು ನಿಷೇಧಾಜ್ಞೆ ಜಾರಿಯಲ್ಲಿದ್ದರೂ, ನಿಯಮ ಮೀರಿ ಪೆಂಡಾಲ್ ಗೌರಿ-ಗಣಪತಿ ಮೂರ್ತಿಗಳನ್ನು ದೇವಿಗೆರೆ ಆವರಣದಲ್ಲಿ ವಿಸರ್ಜನೆ ಮಾಡಲು ಬಿಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ನೋಟಿಸ್‌ನಲ್ಲಿ ಉಲ್ಲೇಖಿಸಿದ್ದಾರೆ.
ನಿಷೇಧಾಜ್ಞೆ ಉಲ್ಲಂಘಿಸಿ ವಿಸರ್ಜನೆ ಮಾಡಿದ ಆಯೋಜಕರ ವಿರುದ್ಧ ಪೊಲೀಸರು ಯಾವುದೇ ಕಾನೂನು ಕ್ರಮ ಜರುಗಿಸಿಲ್ಲ. ನಿಮ್ಮ ಈ ಬೇಜವಾಬ್ದಾರಿತನವು ಸರ್ಕಾರಿ ನೌಕರರಿಗೆ ತರವಲ್ಲದ್ದಾಗಿದ್ದು, ವಹಿಸಲಾದ ಕೆಲಸವನ್ನು ನಿರ್ವಹಿಸದೇ ಉದ್ಧಟತನ ತೋರಿರುವುದು ಕಂಡುಬಂದಿದೆ. ಕರ್ತವ್ಯ ಲೋಪ ಹಾಗೂ ಉದ್ಧಟತನಕ್ಕಾಗಿ ನಿಮ್ಮ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಸರ್ಕಾರಕ್ಕೆ ಏಕೆ ಶಿಫಾರಸು ಮಾಡಬಾರದು ಎದು ಪ್ರಶ್ನಿಸಿರುವ ಡಿಸಿ, ನೋಟಿಸ್ ತಲುಪಿದ ಕೂಡಲೇ ಖುದ್ದು ಹಾಜರಾಗಿ ಲಿಖಿತ ಸಮಜಾಯಿಷಿ ನೀಡುವಂತೆ ತಾಕೀತು ಮಾಡಿದ್ದಾರೆ. ತಪ್ಪಿದಲ್ಲಿ ಸರ್ಕಾರಕ್ಕೆ ಶಿಸ್ತು ಕ್ರಮಕ್ಕಾಗಿ ಶಿಫಾರಸು ಮಾಡುವುದಾಗಿ ಎಚ್ಚರಿಸಿದ್ದಾರೆ.
70 ವರ್ಷಗಳ ಇತಿಹಾಸ
ಹಾಸನ ನಗರದ ಪೆಂಡಾಲ್ ಗಣಪತಿಗೆ ಬರೋಬ್ಬರಿ 70 ವರ್ಷಗಳ ಇತಿಹಾಸವಿದೆ. ಈ ಸಮಿತಿಯಲ್ಲಿ ಎಲ್ಲಾ ಧರ್ಮೀಯರೂ ಪದಾಧಿಕಾರಿಗಳಾಗಿದ್ದು, ಮೆರವಣಿಗೆ ವೇಳೆ ಅನ್ಯಧರ್ಮೀಯರು ಹಣ್ಣು-ಹಂಪಲು ಹಂಚಿ ಭಾವೈಕ್ಯತೆ ಮೆರೆಯುತ್ತಾರೆ. ಅಕ್ಟೋಬರ್ 3 ರಂದು ಸಂಸದ ಶ್ರೇಯಸ್ ಪಟೇಲ್ ಹಾಗೂ ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಅವರು ಡೋಲು ಬಾರಿಸುವ ಮೂಲಕ ಅದ್ಧೂರಿ ಮೆರವಣಿಗೆಗೆ ಚಾಲನೆ ನೀಡಿದ್ದರು.
ಆಯೋಜಕರು ಮೂರು ತಿಂಗಳ ಹಿಂದೆಯೇ ಮಾರ್ಗ ಹಾಗೂ ದೇವಿಗೆರೆಯಲ್ಲಿ ವಿಸರ್ಜನೆಗೆ ಅನುಮತಿ ಪಡೆದಿದ್ದರು. ಆದರೆ ಮೆರವಣಿಗೆ ಆರಂಭವಾದ ಒಂದು ಗಂಟೆಯ ಬಳಿಕ ದೇವಿಗೆರೆ ಸ್ವಚ್ಛತೆ ದೃಷ್ಟಿಯಿಂದ ವಿಸರ್ಜನೆಗೆ ಅವಕಾಶವಿಲ್ಲ ಎಂದು ಡಿಸಿ ಇದ್ದಕ್ಕಿದ್ದಂತೆ ನಿರ್ಬಂಧ ವಿಧಿಸಿದರು. ಈಗಾಗಲೇ ನಾಲ್ಕು ಗಣೇಶ ಮೂರ್ತಿಗಳನ್ನು ಇದೇ ಕೆರೆಯಲ್ಲಿ ವಿಸರ್ಜಿಸಲು ಅವಕಾಶ ನೀಡಲಾಗಿದ್ದು, ಪೆಂಡಾಲ್ ಗಣಪತಿಗೆ ಮಾತ್ರ ಏಕೆ ನಿರ್ಬಂಧ ಹೇರಲಾಯಿತು ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಜಿಲ್ಲಾಧಿಕಾರಿ ಅವರ ಈ ಏಕಪಕ್ಷೀಯ ನಡೆಯನ್ನು ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ತೀವ್ರವಾಗಿ ಖಂಡಿಸಿದ್ದಾರೆ. ದೇವಿಗೆರೆ ಸ್ವಚ್ಛತೆಯ ಬಗ್ಗೆ ನಮಗೂ ಕಾಳಜಿ ಇದೆ. ಆದರೆ ನಗರದ ಬಹುತೇಕ ಗಣಪತಿಗಳನ್ನು ದೇವಿಗೆರೆಯಲ್ಲೇ ವಿಸರ್ಜಿಸಲಾಗಿದೆ. 70 ವರ್ಷಗಳ ಇತಿಹಾಸವಿರುವ ಪ್ರತಿಷ್ಠಿತ ಗಣಪತಿಗೆ ಮೆರವಣಿಗೆ ಹೊರಟ ಮೇಲೆ ಏಕಾಏಕಿ ನಿರ್ಬಂಧ ಹೇರಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಡಿಸಿ ಅವರು ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿಲ್ಲ. ನಾನು ಎರಡು-ಮೂರು ಬಾರಿ ಕರೆ ಮಾಡಿ ಪರಿಸ್ಥಿತಿ ವಿವರಿಸಿದರೂ ಹಠ ಬಿಡಲಿಲ್ಲ. ಎಸ್ಪಿಗೆ ನೋಟಿಸ್ ಕೊಟ್ಟಿರುವುದು ಅಧಿಕಾರಿಗಳ ನಡುವೆ ಗೊಂದಲ ಸೃಷ್ಟಿಸುತ್ತದೆ. ಹಾಸನಾಂಬೆ ಜಾತ್ರಾ ಮಹೋತ್ಸವ ಸಮೀಪಿಸುತ್ತಿರುವಾಗ ಅಧಿಕಾರಿಗಳಲ್ಲೇ ಹೊಂದಾಣಿಕೆ ಇಲ್ಲದಿದ್ದರೆ ಜಾತ್ರೆ ಹೇಗೆ ನಡೆಸುತ್ತಾರೆ ಎಂದು ಕೇಳಿದ್ದಾರೆ.
ಆಯೋಜಕರ ಮೇಲೆ ಕ್ರಮ ಕೈಗೊಳ್ಳಿ ಎಂದು ಡಿಸಿ ಹೇಳಿದ್ದಾರೆ. ಒಂದು ವೇಳೆ ಆಯೋಜಕರ ಮೇಲೆ ಪ್ರಕರಣ ದಾಖಲಿಸಿದರೆ, ಹಾಸನದ ಸಮಸ್ತ ಜನತೆಯನ್ನು ಒಗ್ಗೂಡಿಸಿ ಡಿಸಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.



























