ಪುತ್ತೂರು: ಕುಮಟಾ ತಾಲೂಕಿನ ಮಿರ್ಜಾನ್ ಬೆಳಗರಣಿ ಕ್ರಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಯಾವುದೇ ಸಿಗ್ನಲ್ ಇಲ್ಲದೆ ಯು ಟರ್ನ್ ಮಾಡಿದ ಬಸ್ ನಿಂದಾಗಿ ಸಂಭವಿಸಿದ ಇನ್ನೋವಾ ಕಾರು ಅಪಘಾತದಲ್ಲಿ ಕಾರಿನಲ್ಲಿದ್ದ ಪುತ್ತೂರಿನ ಏಳು ಮಂದಿ ಗಾಯಗೊಂಡಿರುವ ಬಗ್ಗೆ ಕುಮಟಾ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಪಘಾತದಿಂದಾಗಿ ಕಾರಿನ ಎದುರ ಭಾಗ ಜಖಂಗೊಡಿದ್ದು, ಕಾರು ಚಾಲಕ ಚಂದ್ರಕಾಂತ ಸಿ, (34ವ), ಪ್ರಯಾಣಿಕರಾದ ಅವನೀಶ್ (18ವ), ಆದಿತ್ಯ(14ವ), ಧನ್ಯ ಶ್ರೀ(26ವ), ಕೀರ್ತನಾ(19ವ), ಸಾವಿತ್ರಿ (47ವ) ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಕ್ಷರಿ (12ವ)ಎಂಬವರಿಗೆ ತುಟಿ ಹಾಗೂ ಮುಖಭಾಗಕ್ಕೆ ಗಂಭೀರ ಗಾಯವಾಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಗಾಯಾಳು ಅಕ್ಷರಿಯವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಪುತ್ತೂರಿನಿಂದ ಗೋಕರ್ಣ ಮಠಕ್ಕೆ ತೆರಳುತ್ತಿದ್ದ ಇನ್ನೋವಾ ಕಾರು ಮಿರ್ಜಾನ್ ಬೆಳಗರಣಿ ಕ್ರಾಸ್ ಬಳಿ ಹೆದ್ದಾರಿಯ ಬಲಬದಿಯ ಪಥದಲ್ಲಿ ಸಾಗುತ್ತಿದ್ದ ವೇಳೆ, ಕುಮಟಾ ಕಡೆಯಿಂದ ಬರುತ್ತಿದ್ದಬಸ್ ಏಕಾಏಕಿ ಯುಟರ್ನ್ ಪಡೆಯಲು ಬಲಭಾಗಕ್ಕೆ ತಿರುಗಿದೆ.
ಬಸ್ ಚಾಲಕ ಗೋವಿಂದ ಜಟ್ಟಿ ಅಡಿಗುಂಡಿ ಅವರು ಯಾವುದೇ ಕೈಸನ್ನೆ ಅಥವಾ ಸಿಗ್ನಲ್ ನೀಡದೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಬಸ್ ಚಲಾಯಿಸಿ ಯುಟರ್ನ್ ಹೊಡೆಯಲು ಮುಂದಾದ ಪರಿಣಾಮ ಕಾರಿಗೆ ಡಿಕ್ಕಿಯಾಗಿದೆ ಎಂದು ಕಾರು ಚಾಲಕ ಸುಳ್ಯ ತಾಲೂಕಿನ ಪಂಜ ನಿವಾಸಿ ಚಂದ್ರಕಾಂತ ಸಿ. ಅವರು ದೂರಿನಲ್ಲಿ ತಿಳಿಸಿದ್ದಾರೆ.
ಅಜಾಗರೂಕತೆಯಿಂದ ಬಸ್ ಚಾಲನೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಕುಮಟಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


























