ಪುತ್ತೂರು: ಸಂಜೆ ಸುರಿದ ಭಾರೀ ಮಳೆಗೆ ಆನೆಮಜಲು ಕೋರ್ಟ್ ಬಳಿಯ ಆವರಣ ಗೋಡೆಯೊಂದು ಕುಸಿದು ರಸ್ತೆಗೆ ಬಿದ್ದ ಘಟನೆ ನಡೆದಿದೆ.
ಕೋರ್ಟ್ ಬಳಿಯ ಅಂಗನವಾಡಿ ಕಟ್ಟಡದ ಸಮೀಪದಲ್ಲಿದ್ದ ಆವರಣ ಗೋಡೆ ಕುಸಿದು ರಸ್ತೆಗೆ ಬಿದ್ದ ಪರಿಣಾಮ ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಇದರಿಂದ ರಸ್ತೆ ತಾತ್ಕಾಲಿಕವಾಗಿ ಬ್ಲಾಕ್ ಆಗಿದೆ.
ಇನ್ನೊಂದು ಬದಿಯಲ್ಲಿರುವ ಆವರಣ ಗೋಡೆಯೂ ಕುಸಿಯುವ ಹಂತದಲ್ಲಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಕಳೆದ ಜನವರಿಯಲ್ಲಿ ನ್ಯಾಯಾಲಯ ಸಂಕೀರ್ಣ ಉದ್ಘಾಟನೆಗೊಂಡಿದ್ದು, ಒಂದು ಮಳೆಗಾಲ ಪೂರ್ಣಗೊಳ್ಳುವ ಮೊದಲೇ ಆವರಣ ಗೋಡೆ ಕುಸಿದಿರುವುದು ಕಾಮಗಾರಿಯ ಗುಣಮಟ್ಟದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.



























