ಪುತ್ತೂರು: ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದ ಪಡುಬಿದ್ರೆ ನಿವಾಸಿ ಯುವಕನೋರ್ವ ಮಲಗಿದ್ದ ಸ್ಥಿತಿಯಲ್ಲಿಯೇ ಅನುಮಾನಾಸ್ಪದವಾಗಿ ಮೃತಪಟ್ಟಿರುವುದು ಅ.7ರಂದು ವೇಳೆ ಬೆಳಕಿಗೆ ಬಂದಿದೆ.
ಪಡುಬಿದ್ರಿ ಕಂಚಿನಡ್ಕ ಸುಂದರ ಪೂಜಾರಿ ಅವರ ಪುತ್ರ ವಿನೇಶ್ ಪೂಜಾರಿ(33ವ.) ಮೃತಪಟ್ಟವರು. ಮಂಗಳೂರಿನ ಆಡಿಟಿಂಗ್ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದ ವಿನೇಶ್ ಅವರು ದರ್ಬೆಯಲ್ಲಿರುವ ಜಿನಸು ಸಾಮಾಗ್ರಿಗಳ ಮಳಿಗೆಯೊಂದರಲ್ಲಿ ಕಳೆದ ಸುಮಾರು ತಿಂಗಳುಗಳಿಂದ ಆಡಿಟಿಂಗ್ ಕೆಲಸ ನಿರ್ವಹಿಸುತ್ತಿದ್ದು ಎಪಿಎಂಸಿ ರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಇದ್ದರು.
ಅವಿವಾಹಿತರಾಗಿದ್ದ ಅವರು ಒಬ್ಬಂಟಿಯಾಗಿ ವಾಸ್ತವ್ಯ ಹೊಂದಿದ್ದರು . ಅ.6ರಂದು ಸಂಜೆ ಎಂದಿನಂತೆ ಕೆಲಸ ಮುಗಿಸಿ ರೂಂಗೆ ತೆರಳಿದ್ದ ಅವರು ಅ.7ರಂದು ಕೆಲಸಕ್ಕೆ ಬಂದಿರಲಿಲ್ಲ. ಅವರ ಮೊಬೈಲ್ ಫೋನ್‌ಗೆ ಎಷ್ಟೇ ಕರೆ ಮಾಡಿದರೂ ಕರೆ ಸ್ವೀಕರಿಸುತ್ತಿರಲಿಲ್ಲ. ಮಧ್ಯಾಹ್ನ ಊಟಕ್ಕೆ ತೆರಳುವ ಸಮಯದಲ್ಲಿ, ಅವರ ಜೊತೆಗೆ ಕೆಲಸಮಾಡುತ್ತಿದ್ದ ಸಂಗಡಿಗರು ವಿನೇಶ್ ಅವರ ಮೊಬೈಲ್ ಗೆ ಕರೆ ಮಾಡಿದರೂ ಕರೆ ಸ್ವೀಕರಿಸಲಿಲ್ಲ.
ಅನುಮಾನಗೊಂಡ ಅವರು ಬಾಡಿಗೆ ಮನೆಯ ಬಾಗಿಲ ಬಳಿ ಬಂದಾಗ ಮನೆಗೆ ಒಳಗಿನಿಂದ ಚಿಲಕ ಹಾಕಿತ್ತು. ಅಲ್ಲಿಂದ ಅವರ ಮೊಬೈಲ್‌ಗೆ ಕರೆ ಮಾಡಿದಾಗ ಮೊಬೈಲ್ ಮನೆಯೊಳಗೆ ರಿಂಗ್ ಆಗುವ ಶಬ್ದ ಕೇಳುತ್ತಿದ್ದರೂ ಕರೆ ಸ್ವೀಕರಿಸುತ್ತಿರಲಿಲ್ಲ. ಈ ಬಗ್ಗೆ ಅವರು ಮನೆಯ ಮಾಲಕರ ಗಮನಕ್ಕೆ ತಂದ ಬಳಿಕ ಮನೆಯ ಸ್ಲಾಬ್‌ನ ಇನ್ಸುಲೇಟರ್ ಮೂಲಕ ಮೊಬೈಲ್‌ನಲ್ಲಿ ಮನೆಯೊಳಗಿನ ವೀಡಿಯೋ ಚಿತ್ರೀಕರಣ ಮಾಡಿ ನೋಡಿದಾಗ ವಿನೇಶ್ ಅವರು ಮೃತಪಟ್ಟಿರುವ ಸ್ಥಿತಿಯಲ್ಲಿರುವುದು ಕಂಡು ಬಂದಿತ್ತು.
ನಂತರ ಪೊಲೀಸರು ಹಾಗೂ ವಿನೇಶ್ ಅವರ ಮನೆಯವರಿಗೆ ಮಾಹಿತಿ ನೀಡಿ, ಅವರು ಸ್ಥಳಕ್ಕೆ ಆಗಮಿಸಿದ ಬಳಿಕ ಬಾಗಿಲು ಒಡೆದು ನೋಡಿದಾಗ ವಿನೇಶ್ ಅವರು ಮೃತ ಪಟ್ಟಿರುವುದು ಕಂಡುಬಂದಿದೆ ಎಂದು ತಿಳಿದು ಬಂದಿದೆ.
ಮೃತದೇಹವನ್ನು ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮನೆಯವರಿಗೆ ಹಸ್ತಾಂತರಿಸಲಾಗಿದೆ. ಮೃತರ ಸಹೋದರ ಅವಿನಾಶ್ ನೀಡಿದ ದೂರಿನಂತೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



























