ಪಣಜಿ: ಭಾರತೀಯ ಚಿತ್ರರಂಗದ ಖ್ಯಾತ ಹಿರಿಯ ನಟ ನಾನಾ ಪಾಟೇಕರ್ (75) ಅವರು ಗುರುವಾರ ಬೆಳಿಗ್ಗೆ ತೀವ್ರ ಹೃದಯ ಸ್ತಂಭನದಿಂದ ವಿಧಿವಶರಾಗಿದ್ದಾರೆ.
ಗೋವಾದ ತಮ್ಮ ನಿವಾಸದಲ್ಲಿದ್ದಾಗ ಬೆಳಿಗ್ಗೆ ಸುಮಾರು 5:20ರ ಸುಮಾರಿಗೆ ನಾನಾ ಪಾಟೇಕರ್(Nana Patekar) ತೀವ್ರ ಹೃದಯ ಸ್ತಂಭನ ಉಂಟಾಗಿದೆ. ತಕ್ಷಣವೇ ಅವರನ್ನು ರಕ್ಷಿಸಲು ವೈದ್ಯರು ಸತತ 45 ನಿಮಿಷಗಳ ಕಾಲ ನಿರಂತರವಾಗಿ ಸಿಪಿಆರ್ (CPR) ಪ್ರಕ್ರಿಯೆ ನಡೆಸಿದರಾದರೂ, ಯಾವುದೇ ಸ್ಪಂದನೆ ಸಿಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಮಣಿಪಾಲ್ ಆಸ್ಪತ್ರೆಯ ಆಂಕೊಲಾಜಿ ವಿಭಾಗದ ಮುಖ್ಯಸ್ಥ ಡಾ. ಶೇಖರ್ ಸಾಲ್ಕರ್ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಆಸ್ಪತ್ರೆ ವತಿಯಿಂದ ವೈದ್ಯಕೀಯ-ಕಾನೂನು ಪ್ರಕರಣ ದಾಖಲಿಸಲಾಗಿದ್ದು, ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.
ತಮ್ಮ ಖಡಕ್ ಡೈಲಾಗ್ ಡೆಲಿವರಿ ಹಾಗೂ ಅದ್ಭುತ ಅಭಿನಯದ ಮೂಲಕ ಹಿಂದಿ ಮತ್ತು ಮರಾಠಿ ಚಿತ್ರರಂಗದಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ನಾನಾ ಪಾಟೇಕರ್ ಅವರ ಹಠಾತ್ ನಿಧನಕ್ಕೆ ಇಡೀ ಚಿತ್ರರಂಗ, ಗಣ್ಯರು ಹಾಗೂ ಅಭಿಮಾನಿಗಳು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಹಿಂದಿ ಹಾಗೂ ಮರಾಠಿ ಚಿತ್ರರಂಗದಲ್ಲಿ ದಶಕಗಳ ಕಾಲ ಸಕ್ರಿಯರಾಗಿದ್ದ ನಾನಾ ಪಾಟೇಕರ್, ತಮ್ಮ ವಿಶಿಷ್ಟ ಸಂಭಾಷಣೆ ಶೈಲಿ ಹಾಗೂ ತೀವ್ರತೆಯುಳ್ಳ ನಟನೆಯಿಂದ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದರು. ‘ಪರಿಂದಾ’, ‘ಕ್ರಾಂತಿವೀರ್’, ‘ಅಗ್ನಿಸಾಕ್ಷಿ’, ‘ತಿರಂಗಾ’, ‘ವೆಲ್‌ಕಮ್’, ‘ನಟಸಾಮ್ರಾಟ್’ ಸೇರಿದಂತೆ ಹಲವು ಸಾರ್ವಕಾಲಿಕ ಹಿಟ್ ಚಿತ್ರಗಳಲ್ಲಿ ಅವಿಸ್ಮರಣೀಯ ಪಾತ್ರಗಳನ್ನು ನಿರ್ವಹಿಸಿದ್ದರು. ಅತ್ಯುತ್ತಮ ನಟನೆಗಾಗಿ ಅವರು ಮೂರು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು.
ನಾನಾ ಪಾಟೇಕರ್ ಅವರು ಕನ್ನಡ ಚಿತ್ರದಲ್ಲೂ ಅಭಿನಯಿಸಿದ್ದರು. ನಾನಾ ಪಾಟೇಕರ್ ಕನ್ನಡದಲ್ಲಿ ನಟಿಸಿದ್ದ ಏಕೈಕ ಚಿತ್ರ ಯಕ್ಷ 2010 ರಲ್ಲಿ ಬಿಡುಗಡೆಯಾಗಿತ್ತು.ಈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ನಾನಾ ಪಾಟೇಕರ್ ಅವರು ಯೋಗರಾಜ್ ಪುಲಕೇಶ್ ಎಂಬ ಖಡಕ್ ಮತ್ತು ಪ್ರಾಮಾಣಿಕ ಪೊಲೀಸ್ ಅಧಿಕಾರಿ (ಡಿಸಿಪಿ) ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಪರಿಂಧಾ, ಕ್ರಾಂತಿವೀರ್ ಮತ್ತು ಅಗ್ನಿಸಾಕ್ಷಿ ಚಿತ್ರಗಳ ಅಭಿನಯಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದರು. ಸಿನಿಮಾಗಳಿಗಿಂತ ಮೊದಲು ಮತ್ತು ಅದರ ಜತೆಗೆ ಮರಾಠಿ ರಂಗಭೂಮಿಯಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದರು.
ನಟ ಮಕರಂದ್ ಅನಾಸ್ಪುರೆ ಅವರೊಂದಿಗೆ ‘ನಾಮ್ ಫೌಂಡೇಶನ್’ ಸ್ಥಾಪಿಸಿ, ವಿಶೇಷವಾಗಿ ಮಹಾರಾಷ್ಟ್ರದ ಬರಪೀಡಿತ ರೈತರು ಮತ್ತು ಅವರ ಕುಟುಂಬಗಳಿಗೆ ನೆರವು ನೀಡುವ ಕಾರ್ಯದಲ್ಲಿ ತೊಡಗಿದ್ದರು ಪ್ರಹಾರ್: ದಿ ಫೈನಲ್ ಅಟ್ಯಾಕ್ ಚಿತ್ರದ ಮೂಲಕ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದರು.



























