ಬೆಳ್ತಂಗಡಿ: ಮನೆಯ ಸಮೀಪದ ಅಡಿಕೆ ಮರದಿಂದ ದೋಟಿ ಮೂಲಕ ಅಡಿಕೆ ಕೊಯ್ಯುತ್ತಿದ್ದ ವೇಳೆ ದೋಟಿ ವಿದ್ಯುತ್ ತಂತಿಗೆ ತಾಗಿ ವಿದ್ಯುತ್ ಶಾಕ್ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಧರ್ಮಸ್ಥಳದಲ್ಲಿ ನಡೆದಿದೆ.
ಧರ್ಮಸ್ಥಳ ಗ್ರಾಮದ ಅಜಿಕುರಿ ಬಳಿಯ ನಝಿರ್ (38) ಮೃತಪಟ್ಟವರು.
ಅ.4ರಂದು ಮನೆಯ ಸಮೀಪದ ಅಡಿಕೆ ಮರದಿಂದ ದೋಟಿ ಮೂಲಕ ಅಡಿಕೆ ಕೊಯ್ಯುತ್ತಿದ್ದ ವೇಳೆ ಸಮೀಪದಲ್ಲೇ ಹಾದುಹೋಗಿದ್ದ ವಿದ್ಯುತ್ ತಂತಿಗೆ ಆಕಸ್ಮಿಕವಾಗಿ ದೋಟಿ ತಾಗಿದೆ. ಪರಿಣಾಮ ನಝಿರ್ ಅವರಿಗೆ ವಿದ್ಯುತ್ ಶಾಕ್ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದರು.
ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅ.8ರಂದು ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.


























