ಮಂಗಳೂರು:ನಕಲಿ ಪಾಸ್‌ಪೋರ್ಟ್ ಬಳಸಿ ವಿದೇಶಕ್ಕೆ ತೆರಳಲು ಯತ್ನಿಸಿದ ಪ್ರಕರಣದಲ್ಲಿ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿ 2020ರಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ನೇತೃತ್ವದ ತಂಡ ಬಂಧಿಸಿದೆ.
ಬಂಧಿತನನ್ನು ಕಾಸರಗೋಡು ಜಿಲ್ಲೆಯ ಬೇವಿಂಜೆ ಗ್ರಾಮದ ವೇಲಾಯುಧನ್ (54) ಎಂದು ಗುರುತಿಸಲಾಗಿದೆ.
2010ರ ಜೂ.22ರಂದು ಬಜಪೆ ವಿಮಾನ ನಿಲ್ದಾಣದ ಮೂಲಕ ನಕಲಿ ಪಾಸ್‌ಪೋರ್ಟ್ ಬಳಸಿ ವಿದೇಶಕ್ಕೆ ತೆರಳಲು ಯತ್ನಿಸಿದ್ದ ವೇಳೆ ಇಮಿಗ್ರೇಷನ್ ಅಧಿಕಾರಿಗಳು ವೇಲಾಯುಧನ್‌ನನ್ನು ವಶಕ್ಕೆ ಪಡೆದು ಬಜಪೆ ಪೊಲೀಸರಿಗೆ ಒಪ್ಪಿಸಿದ್ದರು. ಈ ಕುರಿತು ಬಜಪೆ ಪೊಲೀಸ್ ಠಾಣೆಯಲ್ಲಿ ಅ.ಕ್ರ. 141/2010ರಂತೆ ಐಪಿಸಿ ಕಲಂ 419, 420, 468, 34 ಹಾಗೂ ಪಾಸ್‌ಪೋರ್ಟ್ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಪೂರ್ಣಗೊಳಿಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಮಾನ್ಯ ಸೇಷನ್ಸ್ ನ್ಯಾಯಾಲಯವು 2020ರ ಡಿ.1ರಂದು ವೇಲಾಯುಧನ್‌ಗೆ 1 ವರ್ಷ 6 ತಿಂಗಳ ಶಿಕ್ಷೆ ವಿಧಿಸಿತ್ತು.
ಇದನ್ನು ಪ್ರಶ್ನಿಸಿ ಆರೋಪಿ ಕರ್ನಾಟಕ ಹೈಕೋರ್ಟ್‌ಗೆ ಕ್ರಿಮಿನಲ್ ರಿವಿಷನ್ ಪಿಟಿಷನ್ ನಂ.104/2021 ಸಲ್ಲಿಸಿದ್ದರೂ, ಹೈಕೋರ್ಟ್ ಮನವಿಯನ್ನು ತಿರಸ್ಕರಿಸಿತ್ತು. ಬಳಿಕ ದಸ್ತಗಿರಿಯಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದ ವೇಲಾಯುಧನ್‌ನನ್ನು ಅ.8ರಂದು ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ನೇತೃತ್ವದ ತಂಡ ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಬಜಪೆ ಪೊಲೀಸ್ ಠಾಣೆಗೆ ಹಸ್ತಾಂತರಿಸಿದೆ.


























