ಶಿವಮೊಗ್ಗ: ಲಾಡ್ಜ್‌ನಲ್ಲಿ ಗಾಂಜಾ ಸೇವಿಸುತ್ತಿದ್ದ ಯುವತಿ ಸೇರಿ ನಾಲ್ವರನ್ನು ಟೌನ್ ಪೊಲೀಸರು ಬಂಧಿಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದ ಜೋಗ ರಸ್ತೆಯ ಲಾಡ್ಜ್‌ನಲ್ಲಿ ನಡೆದಿದೆ. ಖಚಿತ ಮಾಹಿತಿ ಮೇರೆಗೆ ಲಾಡ್ಜ್ ಮೇಲೆ ದಾಳಿ ಮಾಡಿದ ಪೊಲೀಸರು, ಶಿವಮೊಗ್ಗದ ಕಾರ್ತಿಕ್(19), ಬೆಂಗಳೂರಿನ ಶಶಾಂಕ್(26), ಸಾಗರದ ನಿಶಾಂತ್(25) ಹಾಗೂ ಯುವತಿಯನ್ನ ಬಂಧಿಸಿದ್ದಾರೆ.
ಶಿವಮೊಗ್ಗದಲ್ಲಿ ಗಾಂಜಾ ಹಾವಳಿ ಮಿತಿಮೀರಿದೆ ಎನ್ನುವುದಕ್ಕೆ ಮತ್ತೊಂದು ಘಟನೆ ಸಾಕ್ಷಿಯಾಗಿದೆ. ಸಾಗರದ ಜೋಗ ರಸ್ತೆಯ ಲಾಡ್ಜ್ ಒಂದರಲ್ಲಿ ಯುವತಿ ಸೇರಿ ನಾಲ್ವರು ಗಾಂಜಾ ಸೇವಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಎಎಸ್ಪಿ ನಿರ್ದೇಶನದಂತೆ ಪಿಎಸ್‌ಐ ಶಾಂತರಾಜ್ ಹೆಚ್.ಜಿ. ಹಾಗೂ ಸಿಬ್ಬಂದಿ ಲಾಡ್ಜ್ ಮೇಲೆ ದಿಢೀರ್ ದಾಳಿ ಮಾಡಿ ಕೊಠಡಿ ಪರಿಶೀಲಿಸಿದ್ದು, ಈ ವೇಳೆ ಮೂವರು ಯುವಕರು ಹಾಗೂ ಓರ್ವ ಯುವತಿ ಸಿಗರೇಟ್‌ನಲ್ಲಿ ಗಾಂಜಾ ತುಂಬಿ ಸೇವಿಸುತ್ತಿರುವುದು ಪತ್ತೆ ಆಗಿದೆ. ಕೂಡಲೇ ಎಲ್ಲರನ್ನು ವಶಕ್ಕೆ ಪಡೆಯಲಾಗಿದೆ.
ಇನ್ನು ವೈದ್ಯಕೀಯ ಪರೀಕ್ಷೆಯಲ್ಲಿ ಕಾರ್ತಿಕ್, ಶಶಾಂಕ್ ಹಾಗೂ ಯುವತಿ ಗಾಂಜಾ ಸೇವಿಸಿರುವುದು ದೃಢ ಪಟ್ಟಿದೆ. ಸಾಗರದ ಮನು ಹೆಗಡೆ ಎಂಬಾತ ಗಾಂಜಾ ಸರಬರಾಜು ಮಾಡಿರುವುದಾಗಿ ವಿಚಾರಣೆ ವೇಳೆ ಯುವತಿ ಸ್ಫೋಟಕ ಹೇಳಿಕೆ ನೀಡಿದ್ದಾಳೆ. ಸದ್ಯ ಸಾಗರ ಟೌನ್ ಠಾಣೆಯಲ್ಲಿ ಒಟ್ಟು ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.



























