ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್ ನಟ ದರ್ಶನ್ ಹಾಗೂ ಗ್ಯಾಂಗ್ ಮೇಲಿನ ವಿಚಾರಣೆ ತೀವ್ರಗೊಂಡಿದೆ. ಪ್ರಕರಣದ ವಿಚಾರಣೆ ನಡೆಸುತ್ತಿರುವ ಬೆಂಗಳೂರಿನ 59ನೇ ಸಿಎಸ್‌ಎಚ್ ನ್ಯಾಯಾಲಯವು ನಟರಾದ ಚಿಕ್ಕಣ್ಣ ಹಾಗೂ ಯಶಸ್ ಸೂರ್ಯ ಅವರಿಗೆ ಸಮನ್ಸ್ ಜಾರಿಗೊಳಿಸಿದೆ. ಅಕ್ಟೋಬರ್ 15ರಂದು ನ್ಯಾಯಾಲಯದ ಮುಂದೆ ಖುದ್ದಾಗಿ ಹಾಜರಾಗಿ ಹೇಳಿಕೆ ದಾಖಲಿಸುವಂತೆ ಇಬ್ಬರೂ ನಟರಿಗೆ ಕೋರ್ಟ್ ನಿರ್ದೇಶನ ನೀಡಿದೆ.
ರೇಣುಕಾಸ್ವಾಮಿ ಹತ್ಯೆ ನಡೆದ ದಿನದಂದು (ಜೂನ್ 8, 2024) ನಟ ದರ್ಶನ್ ಅವರು ಆರ್‌ಆರ್ ನಗರದ ‘ಸ್ಟೋನಿಬ್ರೂಕ್’ ರೆಸ್ಟೋರೆಂಟ್‌ನಲ್ಲಿ ಆಯೋಜಿಸಲಾಗಿದ್ದ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಈ ಪಾರ್ಟಿಯಲ್ಲಿ ನಟ ಚಿಕ್ಕಣ್ಣ ಕೂಡ ಉಪಸ್ಥಿತರಿದ್ದರು. ತನಿಖಾಧಿಕಾರಿಗಳು ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ನಟ ಚಿಕ್ಕಣ್ಣ ಅವರನ್ನು ದರ್ಶನ್ ವಿರುದ್ಧದ ಪ್ರಮುಖ ಸಾಕ್ಷಿಯನ್ನಾಗಿ ಸೇರಿಸಲಾಗಿದೆ.
ಹತ್ಯೆ ನಡೆಯುವ ಕೆಲವೇ ಗಂಟೆಗಳ ಮೊದಲು ನಟ ದರ್ಶನ್ ಎಲ್ಲಿದ್ದರು, ಯಾರ ಜೊತೆಗಿದ್ದರು ಹಾಗೂ ಅವರ ನಡವಳಿಕೆ ಹೇಗಿತ್ತು ಎಂಬುದನ್ನು ದೃಢೀಕರಿಸಲು ಚಿಕ್ಕಣ್ಣ ಅವರ ಸಾಕ್ಷ್ಯ ಹಾಗೂ ವಿಚಾರಣೆ ಅತ್ಯಂತ ನಿರ್ಣಾಯಕವಾಗಿದೆ. ನ್ಯಾಯಾಲಯದಲ್ಲಿ ಚಿಕ್ಕಣ್ಣ ಅವರು ಯಾವ ರೀತಿಯ ಹೇಳಿಕೆ ನೀಡಲಿದ್ದಾರೆ ಎಂಬುದನ್ನು ತಿಳಿಯುವ ಕೌತುಕ ಎಲ್ಲರಿಗೂ ಇದೆ.
ಈ ಮೊದಲು ತನಿಖಾ ಹಂತದಲ್ಲಿ ಪೊಲೀಸರ ಮುಂದೆ ಹಾಜರಾಗಿದ್ದ ಚಿಕ್ಕಣ್ಣ, ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿಯೂ ಸಿಆರ್‌ಪಿಸಿ 164ರ ಅಡಿಯಲ್ಲಿ ತಮ್ಮ ಸ್ವಯಂಪ್ರೇರಿತ ಹೇಳಿಕೆಯನ್ನು ದಾಖಲಿಸಿದ್ದರು. ಇದೀಗ ವಿಚಾರಣೆ ಪ್ರಕ್ರಿಯೆ ಆರಂಭವಾಗಿರುವುದರಿಂದ, ಕೋರ್ಟ್‌ನಲ್ಲಿ ಪ್ರತ್ಯಕ್ಷ ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿಗಳ ವಿಚಾರಣೆಗಾಗಿ ಅವರಿಗೆ ಸಮನ್ಸ್ ನೀಡಲಾಗಿದೆ.




























