ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಕೊಟ್ಟಾರಚೌಕಿಯ ಮಾಲೆಮಾರ್ ಕ್ರಾಸ್ ಬಳಿ ಗುರುವಾರ ರಾತ್ರಿ ಪಿಕಪ್ ವಾಹನದಿಂದ ಕಬ್ಬಿಣದ ಸಲಾಕೆಗಳು ರಸ್ತೆಗೆ ಬಿದ್ದು, ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.
ಕಬ್ಬಿಣದ ಸಲಾಕೆಗಳನ್ನು ತುಂಬಿಕೊಂಡು ಸಾಗುತ್ತಿದ್ದ ಪಿಕಪ್ ವಾಹನಕ್ಕೆ ಬೈಕ್‌ವೊಂದು ಏಕಾಏಕಿ ಅಡ್ಡ ಬಂದ ಹಿನ್ನೆಲೆಯಲ್ಲಿ ಚಾಲಕ ತಕ್ಷಣ ಬ್ರೇಕ್ ಹಾಕಿದ್ದಾನೆ. ಈ ವೇಳೆ ವಾಹನದಲ್ಲಿದ್ದ ಕಬ್ಬಿಣದ ಸಲಾಕೆಗಳು ರಸ್ತೆಗೆ ಬಿದ್ದಿವೆ.
ಪಿಕಪ್ ವಾಹನದಲ್ಲಿ ಮಿತಿಗಿಂತ ಉದ್ದದ ಕಬ್ಬಿಣದ ಸಲಾಕೆಗಳನ್ನು ಹೇರಿಕೊಂಡು ಸಾಗಿಸಲಾಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆಯಿಂದಾಗಿ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.




























