ಮಂಗಳೂರು : ಆಸ್ತಿಗಾಗಿ ಮಗಳೇ ತಂದೆಯನ್ನು ಕೊಲೆ ಮಾಡಿ, ಮರಣೋತ್ತರ ಪರೀಕ್ಷೆ ನಡೆಸದೇ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ ಎಂಬ ಆರೋಪದ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಸುಮಾರು ಎರಡು ತಿಂಗಳ ಹಿಂದೆ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದ ವ್ಯಕ್ತಿಯ ಮೃತದೇಹವನ್ನು ಎಫ್‌ಎಸ್‌ಎಲ್ ತಪಾಸಣೆಗಾಗಿ ಹೂತುಹಾಕಿದ ಸ್ಥಳದಿಂದ ಹೊರತೆಗೆಯಲು ಮಂಗಳೂರು ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಮಂಗಳೂರಿನ ಕೊಟ್ಟಾರ ಫಸ್ಟ್ ಕ್ರಾಸ್ ನಿವಾಸಿ ಆಲ್ಬರ್ಟ್ ರೇಗೋ ಎಂಬುವರು ಜುಲೈ 19ರಂದು ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ದೂರಿನ ಪ್ರಕಾರ, ಅವರೊಂದಿಗೆ ವಾಸಿಸುತ್ತಿದ್ದ ಮಗಳು ಮಾಯಾ ರೇಗೋ ಅವರು, ಮರಣೋತ್ತರ ಪರೀಕ್ಷೆ ನಡೆಸದೆ ಹಾಗೂ ಕುಟುಂಬದ ಇತರ ಸದಸ್ಯರಿಗೆ ಮತ್ತು ಸ್ಥಳೀಯರಿಗೆ ಸಾವಿನ ಕುರಿತು ಸೂಕ್ತ ಮಾಹಿತಿ ನೀಡದೆ ಆಪ್ತರ ನೆರವಿನಿಂದ ಅಂತ್ಯಸಂಸ್ಕಾರ ನೆರವೇರಿಸಿದ್ದರು.
ಇದರಿಂದ ಮಗಳ ಮೇಲೆ ಸಂಶಯಗೊಂಡು ರೇಗೋ ಸ್ನೇಹಿತರು ಉರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಮಾಯಾ ವಿರುದ್ಧ ಪ್ರಕರಣ ದಾಖಲಾಗಿದೆ.ರೇಗೋ ಸಾವಿಗೂ ಮುನ್ನ ತಂದೆಯಿಂದ ಒತ್ತಾಯಪೂರ್ವಕವಾಗಿ ವಿಲ್ ಬರೆಸಿಕೊಂಡಿದ್ದಾರೆ. ಬಳಿಕ ಬಾಯ್ ಫ್ರೆಂಡ್ ಜೊತೆ ಸೇರಿ ತಂದೆಯನ್ನೇ ಕೊಲೆ ಮಾಡಲಾಗಿದೆ. ನಂತರ ಪೊಲೀಸರ ಜೊತೆ ಸೇರಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದಾರೆ ಎಂಬ ಆರೋಪ ಸಹ ಕೇಳಿಬಂದಿದೆ.
ರೇಗೋ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಅವರು ಮಕ್ಕಳಿಗಾಗಿ ಸಾಕಷ್ಟು ಆಸ್ತಿ ಮಾಡಿದ್ದರು. ದುಬೈನಲ್ಲಿ ಇಬ್ಬರು ಮಕ್ಕಳು ವಾಸವಾಗಿದ್ದರು. ಅವರು ಮಗಳೊಂದಿಗೆ ಮಂಗಳೂರಿನಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ.




























