ಮಂಗಳೂರು: ಮಂಗಳೂರಿನ ಮೂಡುಶೆಡ್ಡೆ ಗ್ರಾಮದಲ್ಲಿ ಖಬರಿಸ್ತಾನ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಿರುವ ವಿಚಾರ ವಿವಾದಕ್ಕೆ ಕಾರಣವಾಗಿದೆ. ಗ್ರಾಮದ ಸರ್ವೇ ನಂಬರ್ 74ರ ವ್ಯಾಪ್ತಿಯಲ್ಲಿ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರಕ್ಕೆ ಮೀಸಲಿಟ್ಟಿರುವ ಜಾಗದಲ್ಲಿ, ಹಯತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದರಸಕ್ಕೆ ಎರಡು ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿದೆ ಎನ್ನಲಾಗಿದ್ದು, ಸ್ಥಳದಲ್ಲಿ ಮಣ್ಣಿನ ಕಾಮಗಾರಿ ಆರಂಭವಾಗಿದೆ.
ಮಂಜೂರಾದ ಜಾಗದ ಸುತ್ತಮುತ್ತ ಜಾರಂದಾಯ ದೈವದ ಧರ್ಮಚಾವಡಿ, ನಾಗಬನ ಹಾಗೂ ಜೈನ ಬಸದಿಗಳು ಇರುವುದರಿಂದ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಧಾರ್ಮಿಕ ಕೇಂದ್ರಗಳ ಸಮೀಪದಲ್ಲೇ ಖಬರಿಸ್ತಾನ ನಿರ್ಮಾಣಕ್ಕೆ ಮುಂದಾಗಿರುವುದಕ್ಕೆ ಕೆಲವು ಗ್ರಾಮಸ್ಥರು ಹಾಗೂ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿವೆ.
ಸ್ಥಳೀಯರ ಪ್ರಕಾರ, ಈ ಪ್ರದೇಶದಲ್ಲಿ ನಿವೇಶನಕ್ಕಾಗಿ ಬೇಡಿಕೆ ಸಲ್ಲಿಸಿದ್ದರೂ ಆಡಳಿತ ಸ್ಪಂದಿಸಿಲ್ಲ. ಅಲ್ಲದೆ, ಗ್ರಾಮ ಪಂಚಾಯತ್ ಗಮನಕ್ಕೆ ತಾರದೆ ಜಾಗ ಮಂಜೂರು ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಮಂಜೂರಾತಿ ಆದೇಶವನ್ನು ತಕ್ಷಣ ಹಿಂಪಡೆದು, ಭೂಮಿಯನ್ನು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರಕ್ಕೆ ಮರಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಹಿಂದೂ ಸಂಘಟನೆಗಳು ‘ಮೂಡುಶೆಡ್ಡೆ ಚಲೋ’ಗೆ ಕರೆ ನೀಡಿವೆ. ಕಾಮಗಾರಿ ಸ್ಥಗಿತಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ತೀವ್ರಗೊಳಿಸುವುದಾಗಿ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಜಾಗ ಮಂಜೂರಾತಿ, ಸ್ಥಳೀಯರ ಆಕ್ಷೇಪ ಹಾಗೂ ಧಾರ್ಮಿಕ ಕೇಂದ್ರಗಳ ಸನಿಹದಲ್ಲಿ ಖಬರಿಸ್ತಾನ ನಿರ್ಮಾಣದ ವಿಚಾರವಾಗಿ ಮೂಡುಶೆಡ್ಡೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.



























