ರಾಷ್ಟ್ರೀಯ ಹೆದ್ದಾರಿಯಲ್ಲಿ ಪೂರ್ಣ ವೇಗದಲ್ಲಿ ಚಲಿಸುತ್ತಿದ್ದ ಖಾಸಗಿ ಬಸ್ಸಿಗೆ ಏಕಾಏಕಿ ಗಿಡುಗವೊಂದು ಬಡಿದ ಪರಿಣಾಮ ಬಸ್ಸಿನ ಮುಂಭಾಗದ ವಿಂಡ್ ಸ್ಕ್ರೀನ್ ಗಾಜು ಸಂಪೂರ್ಣ ಪುಡಿಯಾದ ಆಘಾತಕಾರಿ ಘಟನೆ ಮಂಗಳೂರು ಹೊರವಲಯದ ಹಳೆಯಂಗಡಿಯಲ್ಲಿ ನಡೆದಿದೆ. ಬಸ್ಸಿನ ಗಾಜು ಚೂರುಚೂರಾದರೂ ಎದೆಗುಂದದೆ ಚಾಲಕ ಸಮಯಪ್ರಜ್ಞೆ ಮೆರೆದು ಬಸ್ಸನ್ನು ನಿಯಂತ್ರಿಸಿದ್ದು, ಭಾರಿ ಅವಘಡವೊಂದು ತಪ್ಪಿದಂತಾಗಿದೆ.
ಮಂಗಳೂರು ಕಡೆಯಿಂದ ಸಂಚರಿಸುತ್ತಿದ್ದ ಲಕ್ಷ್ಮಿ ಗಣೇಶ್ ಹೆಸರಿನ ಖಾಸಗಿ ಬಸ್ ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ಈ ವಿಚಿತ್ರ ಅಪಘಾತ ಸಂಭವಿಸಿದೆ. ಬಸ್ ವೇಗವಾಗಿ ಸಾಗುತ್ತಿದ್ದಾಗ ಎಲ್ಲಿಂದಲೋ ಹಾರಿಬಂದ ಗಿಡುಗ ನೇರವಾಗಿ ಬಸ್ಸಿನ ಚಾಲಕನ ಎದುರಿನ ಮುಂಭಾಗದ ಗಾಜಿಗೆ ರಭಸದಿಂದ ಬಡಿತ ನೀಡಿದೆ. ಬಡಿತದ ರಭಸಕ್ಕೆ ಬಸ್ಸಿನ ಮುಂಭಾಗದ ಗಾಜು ಸಂಪೂರ್ಣವಾಗಿ ಪುಡಿಯಾಗಿ ಚೂರುಚೂರಾಗಿದೆ.
ಹಾರುವ ಹಕ್ಕಿ ಏಕಾಏಕಿ ಬಡಿದು ಮುಂಭಾಗದ ಗಾಜು ಪುಡಿಯಾದಾಗ ಸಾಮಾನ್ಯವಾಗಿ ಚಾಲಕರು ನಿಯಂತ್ರಣ ಕಳೆದುಕೊಳ್ಳುವ ಅಥವಾ ಗಾಬರಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ ಬಸ್ ಚಾಲಕ ಹರೀಶ್ ಅವರು ತಕ್ಷಣವೇ ವಿಚಲಿತರಾಗದೆ, ಶಾಂತಚಿತ್ತರಾಗಿ ಬಸ್ಸಿನ ಸ್ಟೀರಿಂಗ್ ನಿಯಂತ್ರಿಸಿ ವಾಹನವನ್ನು ಹೆದ್ದಾರಿ ಬದಿಯಲ್ಲಿ ಸುರಕ್ಷಿತವಾಗಿ ನಿಲ್ಲಿಸಿದ್ದಾರೆ. ಚಾಲಕ ಹರೀಶ್ ಅವರ ಈ ಸಮಯಪ್ರಜ್ಞೆಯಿಂದಾಗಿ ಬಸ್ಸಿನಲ್ಲಿದ್ದ ಹತ್ತಾರು ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಗಿಡುಗ ಬಡಿದು ಬಸ್ಸಿನ ಮುಂಭಾಗದ ಗಾಜಿಗೆ ಭಾರಿ ಹಾನಿಯಾಗಿದೆ.



























