ಬೆಳ್ತಂಗಡಿ: ನಾವೂರು ಪೇಟೆಯ ಸ್ವಾತಿ ಕಟ್ಟಡದಲ್ಲಿರುವ ಡಾ. ಪ್ರದೀಪ್ ಅವರು ನಡೆಸುತ್ತಿದ್ದ ಆರೋಗ್ಯ ಕ್ಲಿನಿಕ್ಗೆ ಡೀಸೆಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, ಇನ್ನಿಬ್ಬರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ನಾವೂರು ನಿವಾಸಿ ರವಿ ಪೂಜಾರಿ ಬಂಧಿತ ಆರೋಪಿ. ನಾವೂರು ನಿವಾಸಿ ಸುರೇಶ್ ಇಂಚರ ಹಾಗೂ ಪುತ್ತೂರಿನ ಕೌಡಿಚಾರು ನಿವಾಸಿ ದಿನೇಶ್ ಪ್ರಭು ನಾವೂರು ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಅ. 6ರಂದು ತಡರಾತ್ರಿ ದುಷ್ಕರ್ಮಿಗಳು ಕ್ಲಿನಿಕ್ಗೆ ಡೀಸೆಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಲು ಯತ್ನಿಸಿದ್ದರು. ಘಟನೆಯಲ್ಲಿ ಕ್ಲಿನಿಕ್ನಲ್ಲಿದ್ದ ಔಷಧಿಗಳು ಹಾಗೂ ವೈದ್ಯಕೀಯ ಸಲಕರಣೆಗಳು ಸಂಪೂರ್ಣ ಸುಟ್ಟು ಹೋಗಿದ್ದು, ಸುಮಾರು 2ರಿಂದ 3 ಲಕ್ಷ ರೂ. ನಷ್ಟ ಸಂಭವಿಸಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಚುರುಕುಗೊಳಿಸಿ, ಒಂದು ವಾರದೊಳಗೆ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಬೂಮರೆಡ್ಡಿ ಹಾಗೂ ಡಿವೈಎಸ್ಪಿ ರೋಹಿಣಿ ಸಿ.ಕೆ. ಅವರ ಮಾರ್ಗದರ್ಶನದಲ್ಲಿ, ವೃತ್ತ ನಿರೀಕ್ಷಕ ರವಿ ಬಿ.ಎಸ್. ನೇತೃತ್ವದಲ್ಲಿ ಪಿಎಸ್ಐಗಳಾದ ಆನಂದ್ ಮತ್ತು ಸಿಕಂದರ್ ಪಾಷಾ ಅವರ ತಂಡ ಕಾರ್ಯಾಚರಣೆ ನಡೆಸಿತ್ತು. ಸೋಕೋ ತಂಡವೂ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.


























