ಪುತ್ತೂರು: ಕೇರಳ ರಾಜ್ಯ ಲಾಟರಿಗಳ ಅಕ್ರಮ ಮಾರಾಟ ಹಾಗೂ ನಕಲಿ ಜಾಲಗಳ ವಿರುದ್ಧ ಕರ್ನಾಟಕ ಸೇರಿದಂತೆ ವಿವಿಧ ಗಡಿ ರಾಜ್ಯಗಳ ಪೊಲೀಸ್ ಇಲಾಖೆಗಳು ತೀವ್ರ ನಿಗಾ ವಹಿಸಿದ್ದು, ನಿರಂತರವಾಗಿ ದಾಳಿ ನಡೆಯುತ್ತಿದ್ದು,ಅ.14ರಂದು ಪುತ್ತೂರಿನಲ್ಲಿ ಇನ್ಸ್ಪೆಕ್ಟರ್ ಜಾನ್ಸನ್ ಡಿ’ಸೋಜ ಅವರ ನೇತೃತ್ವದಲ್ಲಿ ದಾಳಿ ನಡೆಸಿ ಅಕ್ರಮ ಲಾಟರಿ ಟಿಕೇಟ್ಗಳನ್ನು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.
ಮುಖ್ಯ ರಸ್ತೆ ಶ್ರೀನಿವಾಸ ಪೈ ಅವರ ಅಂಗಡಿ ಮತ್ತು ಮಂಜಲ್ಪಡು ಬಳಿ ಲಕ್ಷ್ಮಣ ಎಂಬವರ ಅಂಗಡಿಗೆ ದಾಳಿ ನಡೆಸಿದ ಪೊಲೀಸರು, ಅಕ್ರಮ ಮಾರಾಟಕ್ಕೆಂದು ತಂದಿರಿಸಿದ್ದ ಲಾಟರಿ ಟಿಕೆಟ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಕೇರಳ ರಾಜ್ಯದಲ್ಲಿ ಲಾಟರಿ ಅಧಿಕೃತವಾಗಿದ್ದರೂ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಲಾಟರಿ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದಾಗ್ಯೂ, ಗಡಿ ಭಾಗಗಳಲ್ಲಿ ಕೇರಳ ಲಾಟರಿಗಳನ್ನು ಅಕ್ರಮವಾಗಿ ತಂದು ಮಾರಾಟ ಮಾಡುವ ಜಾಲಗಳ ವಿರುದ್ಧ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತಿದೆ.



























