ಪುತ್ತೂರು: ಮೊಬೈಲ್ನಲ್ಲಿ ಸಿಸ್ಟಮ್ ಅಪ್ಡೇಟ್ ಹೆಸರಿನಲ್ಲಿ ಬಂದ ಮೆಸೇಜ್ಗೆ ‘OK’ ಕ್ಲಿಕ್ ಮಾಡಿದ ಪರಿಣಾಮ ಮೊಬೈಲ್ ಹ್ಯಾಕ್ ಆಗಿ, ಬ್ಯಾಂಕ್ ಖಾತೆಯಿಂದ ₹2.40 ಲಕ್ಷ ಹಣ ವರ್ಗಾವಣೆಯಾಗಿ ವಂಚನೆಗೊಳಗಾದ ಘಟನೆ ವರದಿಯಾಗಿದೆ.
ಪಾಣಾಜೆ ನಿವಾಸಿ ಮಹಮ್ಮದ್ ಕುನ್ಹಿ ಅವರು ವಂಚನೆಗೊಳಗಾದ ವ್ಯಕ್ತಿಯಾಗಿದ್ದು, ಈ ಕುರಿತು ಮಂಗಳೂರು ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
2026ರ ಸೆ.29ರಂದು ಅವರ ಮೊಬೈಲ್ ಪರದೆಯಲ್ಲಿ ಸಿಸ್ಟಮ್ ಅಪ್ಡೇಟ್ಗಾಗಿ ‘OK’ ಕ್ಲಿಕ್ ಮಾಡುವಂತೆ ಮೆಸೇಜ್ ಕಾಣಿಸಿಕೊಂಡಿತ್ತು. ಅದನ್ನು ರದ್ದುಗೊಳಿಸಲು ಪ್ರಯತ್ನಿಸಿದರೂ ‘Cancel’ ಆಯ್ಕೆ ಲಭ್ಯವಿಲ್ಲದ ಕಾರಣ ಅವರು ಅನಿವಾರ್ಯವಾಗಿ ‘OK’ ಕ್ಲಿಕ್ ಮಾಡಿದ್ದರು. ಬಳಿಕ ಮಾಲ್ವೇರ್ ಅಪ್ಲಿಕೇಶನ್ ಡೌನ್ಲೋಡ್ ಆಗಿ ಮೊಬೈಲ್ ಹ್ಯಾಕ್ ಆಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಅ.1ರಂದು ಬೆಟ್ಟಂಪಾಡಿಯ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿರುವ ತಮ್ಮ ಖಾತೆಯಿಂದ ₹50 ಸಾವಿರ ಡೆಬಿಟ್ ಆಗಿರುವ ಬಗ್ಗೆ ಅವರಿಗೆ ಮೆಸೇಜ್ ಬಂದಿತ್ತು. ಬಳಿಕ ಗೂಗಲ್ ಪೇ ಮೂಲಕ ಪರಿಶೀಲಿಸಿದಾಗ ಸೆ.29ರಿಂದ ಅ.1ರವರೆಗೆ ಒಟ್ಟು ₹2,40,000 ಹಣ ಅಪರಿಚಿತ ವ್ಯಕ್ತಿಯ ಖಾತೆಗೆ ವರ್ಗಾವಣೆಯಾಗಿರುವುದು ತಿಳಿದುಬಂದಿದೆ.
ತಮ್ಮ ಹಣವನ್ನು ವಂಚನೆಯಿಂದ ವರ್ಗಾಯಿಸಿಕೊಂಡಿರುವ ಅಪರಿಚಿತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಹಮ್ಮದ್ ಕುನ್ಹಿ ಅವರು ದೂರಿನಲ್ಲಿ ಮನವಿ ಮಾಡಿದ್ದಾರೆ.



























