ಬೆಂಗಳೂರು: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಗಾಜಿನ ಛಾವಣಿ ಹೊಂದಿರುವ ಆಕರ್ಷಕ ವಿಸ್ಟಾಡೋಮ್ ಬೋಗಿಯ ರೈಲು ಪ್ರಯಾಣ ಆರಂಭಿಸಲಿದೆ. ಯಶವಂತಪುರ- ಮಂಗಳೂರು ವಿಶೇಷ ರೈಲಿಗೆ ಉದ್ದೇಶಿತ ಗಾಜಿನ ಛಾವಣಿಯನ್ನು ಹೊಂದಿರುವ ಆಕರ್ಷಕ ವಿಸ್ಟಾಡೋಮ್ ಬೋಗಿಗಳು ಜು.7 ರಿಂದ ಸೇರ್ಪಡೆಗೊಳ್ಳಲಿದ್ದು, ಶನಿವಾರದಿಂದ(ಜು.3) ಬುಕಿಂಗ್ ಆರಂಭವಾಗಲಿದೆ. ಯಶವಂತಪುರದಿಂದ ಮಂಗಳೂರಿಗೆ 1,470 ರೂ. ದರ ನಿಗದಿಪಡಿಸಲಾಗಿದೆ.
ಪ್ರಕೃತಿ ಹಾಗೂ ಕಡಲತೀರದ ಸೌಂದರ್ಯದಿಂದಲೇ ಹೆಸರುವಾಸಿಯಾಗಿರುವ ಪಶ್ಚಿಮಘಟ್ಟ ಮತ್ತು ಕರಾವಳಿ ಭಾಗದಲ್ಲಿ ಸಂಚರಿಸುವ ಮೂರು ರೈಲುಗಳ ದ್ವಿತೀಯ ದರ್ಜೆಯ ಒಂದು ಸಾಮಾನ್ಯ ಬೋಗಿಯನ್ನು ತೆಗೆದು ತಲಾ ಎರಡು ವಿಸ್ಟಾಡೋಮ್ ಕೋಚ್ಗಳನ್ನು ಜೋಡಿಸಲಾಗುತ್ತಿದೆ.
ಬೆಂಗಳೂರು-ಮಂಗಳೂರು ನಡುವೆ ಸಕಲೇಶಪುರದಿಂದ ಸುಬ್ರಹ್ಮಣ್ಯದವರೆಗೆ ಹಾದುಹೋಗುವ 55 ಕಿ.ಮೀ. ರೈಲು ಮಾರ್ಗ ಪ್ರಯಾಣಿಕರ ಪಾಲಿಗೆ ಸ್ವರ್ಗ. ಕಳೆದ ಹಲವು ವರ್ಷಗಳಿಂದ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳಿಗೆ ಗಾಜಿನ ಛಾವಣಿ, ಕಿಟಕಿಗಳನ್ನು ಅಳವಡಿಸುವಂತೆ ಸಾಕಷ್ಟು ಮಂದಿ ಮನವಿ ಮಾಡಿದ್ದರು. ಅದರ ಪ್ರತಿಫಲದಿಂದ ವಿಸ್ಟಾಡೋಮ್ ರೈಲು ಸಂಚಾರ ಆರಂಭಿಸುತ್ತಿದೆ.
ಶಿರಾಡಿ ಘಾಟಿಯ ಸೌಂದರ್ಯ ಸವಿಯಲು ಬೆಂಗಳೂರು-ಮಂಗಳೂರು ರೈಲಿಗೆ ಗಾಜಿನ ಚಾವಣಿ, 180 ಡಿಗ್ರಿ ತಿರುಗುವ ಆಸನ, ಚಾರ್ಜರ್, ಜಿಪಿಎಸ್ ವ್ಯವಸ್ಥೆ ಹಾಗೂ
ಪ್ರಾಕೃತಿಕ ಸೌಂದರ್ಯ ಪಶ್ಚಿಮ ಘಟ್ಟವನ್ನು ಸೀಳಿಕೊಂಡು ಹೋಗುವ ಈ ರೈಲುಮಾರ್ಗದಲ್ಲಿ ಸಂಚರಿಸುವವರಿಗೆ ಶಿರಾಡಿ ಘಾಟಿಯ ಸೌಂದರ್ಯವನ್ನು ರೈಲಿನೊಳಗೆ ಕುಳಿತು ಸವಿಯುವ ಭಾಗ್ಯ ಸಿಗಲಿದೆ.
ಮಾರ್ಗ ಮಧ್ಯದಲ್ಲಿ ಅರಣ್ಯ, ಜಲಪಾತ, ಸುರಂಗ, ಸೇತುವೆಗಳ ರಮಣೀಯ ನೋಟವನ್ನು ಪ್ರಯಾಣಿಕರು ಆಸ್ವಾದಿಸಬಹುದು. ಸದ್ಯ ಮಳೆಗಾಲ ಕೂಡ ಆರಂಭವಾಗಿರುವುದರಿಂದ ಪ್ರಯಾಣ ಅಹ್ಲಾದವನ್ನು ಉಂಟುಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ.
ಯಾವ ರೈಲುಗಳಲ್ಲಿ ವ್ಯವಸ್ಥೆ?:
ವಾರಕ್ಕೆ 3 ಬಾರಿ ಚಲಿಸುವ ಯಶವಂತಪುರ- ಕಾರವಾರ ವಿಶೇಷ ರೈಲು (ರೈಲ್ವೆ ನಂ. 06211 /06212), ವಾರಕ್ಕೆ 3 ಬಾರಿ ಚಲಿಸುವ ಯಶವಂತಪುರ- ಮಂಗಳೂರು ಜಂಕ್ಷನ್ ವಿಶೇಷ ರೈಲು (ರೈಲ್ವೆ ನಂ. 06575/06576), ಯಶವಂತಪುರ -ಮಂಗಳೂರು (ರೈಲ್ವೆ ನಂ. 06539) ಹಾಗೂ ಮಂಗಳೂರು ಜಂಕ್ಷನ್-ಯಶವಂತಪುರ ಎಕ್ಸ್ಪ್ರೆಸ್ನಲ್ಲಿ (ರೈಲ್ವೆ ನಂ. 06540 ) ವಿಸ್ಟಾಡೋಮ್ ಬೋಗಿ ಸೇರ್ಪಡೆಯಾಗಲಿವೆ.