ಮಂಗಳೂರು: ಅಕ್ರಮವಾಗಿ ನುಸುಳಿದ್ದ 38 ಶ್ರೀಲಂಕಾ ಪ್ರಜೆಗಳನ್ನು ನಗರ ಪೊಲೀಸರು ಬಂಧಿಸಿದ್ದ ಪ್ರಕರಣವನ್ನು ರಾಷ್ಟ್ರೀಯ ತನಿಖಾ ತಂಡಕ್ಕೆ ಹಸ್ತಾಂತರಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಜೂನ್ 11 ಶುಕ್ರವಾರದಂದು ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೇಶದಲ್ಲಿ ಅಕ್ರಮವಾಗಿ ನೆಲೆಸಿದ್ದ ಕಾರಣ 38 ಶ್ರೀಲಂಕಾ ಪ್ರಜೆಗಳನ್ನು ಬಂಧಿಸುವ ಮೂಲಕ ಅಂತಾರಾಷ್ಟ್ರೀಯ ಮಾನವ ಕಳ್ಳಸಾಗಣೆ ಜಾಲವೊಂದನ್ನು ಬೇಧಿಸಲಾಗಿತ್ತು.
ನವದೆಹಲಿಯಲ್ಲಿರುವ ಗೃಹ ಸಚಿವಾಲಯದ ಆದೇಶದಂತೆ ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸಲಾಗಿದೆ. ಮಾತ್ರವಲ್ಲದೆ ರಾಷ್ಟ್ರೀಯ ತನಿಖಾ ತಂಡದ ಡಿಎಸ್ಪಿ ಶ್ರೇಣಿಯ ಎನ್ಐಎ ಅಧಿಕಾರಿಗೆ ಈ ಪ್ರಕರಣದ ಕುರಿತು ಸಹಾಯ ಮಾಡಲು ಈಗಾಗಲೇ ಒಂದು ತಂಡವನ್ನು ರಚಿಸಿದ್ದೇವೆ. ಇದಲ್ಲದೆ ಸ್ಥಳೀಯ ಪೊಲೀಸರು ತನಿಖೆಗೆ ಬೇಕಾದ ಎಲ್ಲಾ ರೀತಿಯ ಸಹಕಾರ ನೀಡಿ ಇತರ ಬೆಂಬಲವನ್ನು ಒದಗಿಸಿ ಎನ್ಐಎ ಜೊತೆ ತನಿಖೆಗೆ ಸಹಾಯ ಮಾಡಲಿದ್ದಾರೆ ಎಂದು ಶಶಿಕುಮಾರ್ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಈಗಾಗಲೇ ಎನ್ಐಎ ಡಿಎಸ್ಪಿ ಶ್ರೀಣಿಯ ಅಧಿಕಾರಿಗೆ ಹಸ್ತಾಂತರಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಘಟನೆಯ ವಿವರ:
ಮೂವತ್ತೆಂಟು ಶ್ರೀಲಂಕಾದ ಪ್ರಜೆಗಳು ಶ್ರೀಲಂಕಾದಿಂದ ಅಕ್ರಮವಾಗಿ ತಮಿಳುನಾಡಿಗೆ ಪ್ರವೇಶಿಸಿ ಮೇ ತಿಂಗಳ ಸುಮಾರಿಗೆ ಮಂಗಳೂರು ತಲುಪಿದ್ದರು. ಸುಮಾರು ಒಂದೂವರೆ ತಿಂಗಳಿನಿಂದ ಎರಡು ಲಾಡ್ಜ್‌ಗಳಲ್ಲಿ ಮತ್ತು ಎರಡು ಮನೆಗಳಲ್ಲಿ ತಂಗಿದ್ದರು, ಅಲ್ಲದೆ ಇವರು ಸ್ಥಳೀಯವಾಗಿ ತಮ್ಮನ್ನು ದೈನಂದಿನ ಕೂಲಿ ಕಾರ್ಮಿಕರು, ತಮಿಳುನಾಡಿನ ಕಾರ್ಮಿಕರು ಮತ್ತು ಮೀನುಗಾರರೆಂದು ಹೇಳಿಕೊಳ್ಳುತ್ತಿದ್ದರು . ಮಾರ್ಚ್ 17 ರಂದು ಶ್ರೀಲಂಕಾದ ಏಜೆಂಟರಿಗೆ 6 ರಿಂದ 10 ಲಕ್ಷ ಶ್ರೀಲಂಕಾ ನಗದನ್ನು ಪಾವತಿಸಿ ಶ್ರೀಲಂಕಾದಿಂದ ಹೊರಟಿದ್ದು, ಎಜೆಂಟರ ಮೂಲಕ ಕೆನಡಾದಲ್ಲಿ ಉದ್ಯೋಗ ನೀಡುವ ಭರವಸೆ ನೀಡಲಾಗಿತ್ತು. ದೋಣಿ ಮೂಲಕ ತಮಿಳುನಾಡಿನ ತೂತುಕುಡಿ ತಲುಪಿದರು. ತೂತುಕುಡಿಯನ್ನು ತಲುಪಿದ ನಂತರ, ಹತ್ತಿರದ ಬಂದರನ್ನು ತಲುಪಿ ಖಾಸಗಿ ದೋಣಿಗಳು ಮತ್ತು ಸರಕು ಹಡಗುಗಳ ಮೂಲಕ ಕೆನಡಾಕ್ಕೆ ಪ್ರಯಾಣಿಸುವುದು ಅವರ ಯೋಜನೆಯಾಗಿತ್ತು. ಆದರೆ ತಮಿಳುನಾಡಿನಲ್ಲಿ ಚುನಾವಣೆ ಮತ್ತು ಪೊಲೀಸರ ಹೆಚ್ಚಿನ ತಪಾಸಣೆಯಿಂದಾಗಿ ಅವರನ್ನು ಸ್ವಲ್ಪ ಸಮಯದವರೆಗೆ ಮಂಗಳೂರಿಗೆ ತೆರಳಲು ಹೇಳಲಾಗಿತ್ತು. ತಮಿಳುನಾಡಿನಿಂದ ಅವರು ಖಾಸಗಿ ಬಸ್‌ಗಳಲ್ಲಿ ಬೆಂಗಳೂರಿಗೆ ಸಣ್ಣ ಗುಂಪುಗಳಲ್ಲಿ ಪ್ರಯಾಣಿಸಿದರು, ಅಲ್ಲಿ ಬೆಂಗಳೂರಿನ ಏಜೆಂಟರೂ ಇದ್ದರು. ಬೆಂಗಳೂರಿನಿಂದ ಅವರು ಮಂಗಳೂರು ತಲುಪಿ ನೆಲೆಸಿದ್ದರು ಎಂದು ಪೊಲೀಸ್ ಇಲಾಖೆಯ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿತ್ತು.