ಪುತ್ತೂರು : ದರ್ಬೆಯ ಪೆಟ್ರೋಲ್ ಬಂಕ್ ಒಂದರಲ್ಲಿ ಇನ್ನೋವಾ ಕಾರು ಚಾಲಕ ಹಾಗೂ ತಂಡದ ನಡುವೆ ಗಲಾಟೆ ನಡೆದ ಘಟನೆ ಆ.24 ರಂದು ರಾತ್ರಿ 9 ಗಂಟೆ ಸುಮಾರಿಗೆ ನಡೆದಿದೆ.

ಘಟನೆಯಲ್ಲಿ ಇನ್ನೋವಾ ಚಾಲಕ ಕೆಮ್ಮಾಯಿ ನಿವಾಸಿ ರಾಧಾಕೃಷ್ಣ (ಆರ್. ಕೆ) ಗಾಯ ಗೊಂಡಿದ್ದು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಬಗ್ಗೆ ಮಾಹಿತಿ ಅರಿತ ಕೂಡಲೇ ಸ್ಥಳಕ್ಕೆ ಪೋಲಿಸರು ಧಾವಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಘಟನೆಯಿಂದ ಇನ್ನೋವಾ ಕಾರಿಗೂ ಹಾನಿಯಾಗಿದೆ ಎಂದು ತಿಳಿದು ಬಂದಿದೆ.
ರಾಧಾಕೃಷ್ಣ ಅವರು ಇನ್ನೋವಾ ಕಾರಿನಲ್ಲಿ ಕೆಲಸದ ನಿಮಿತ್ತ ಪುತ್ತೂರು ಪೇಟೆಗೆ ಬಂದವರು ಕೆಲಸ ಮುಗಿಸಿ ಅಲ್ಲಿಂದ ವಾಹನಕ್ಕೆ ಡೀಸೆಲ್ ಹಾಕಿಸಲು ಪುತ್ತೂರು ಕಸ್ಬಾ ಗ್ರಾಮದ ದರ್ಬೆ ಜಂಕ್ಷನ್ ಬಳಿ ಇರುವ ಜಗನ್ನಾಥ ರೈ ಪಟ್ರೋಲ್ ಬಂಕ್ ಗೆ ರಾತ್ರಿ 08:30 ಗಂಟೆಗೆ ತಲುಪಿ ತನ್ನ ವಾಹನಕ್ಕೆ ಡೀಸೆಲ್ ಹಾಕಿಸಿ ಬಳಿಕ ಅಲ್ಲಿ ಇರುವ ಏರ್ ಪಂಪ್‌ಗೆ ಹೋಗಿ ವಾಹನದಿಂದ ಇಳಿದು ಟಯರ್‌ಗಳಿಗೆ ಗಾಳಿ ತುಂಬಿಸುವ ಸಮಯ 6 ಜನ ಆರೋಪಿಗಳು ಒಂದು ಕಾರು ಮತ್ತು ಎರಡು ಬೈಕ್‌ನಲ್ಲಿ ಬಂದು ಸ್ಥಳದಲ್ಲಿದ್ದ ಮಾರಕಾಯುಧವಾದ ಫೈಬರ್ ಪಾರ್ಕಿಂಗ್ ಕೋನ್, ನೋಪಾರ್ಕಿಂಗ್ ಬೋರ್ಡಿನ ಕಬ್ಬಿಣದ ಸ್ಟಾಂಡ್, ಹೆಲ್ಮೆಟ್ ಹಾಗೂ ಕಲ್ಲಿನಿಂದ ಬೆನ್ನಿಗೆ ಎಡಗೈ ಮಣಿಗಂಟಿಗೆ, ಹಣೆಯ ಎಡಬದಿಗೆ ಬಲವಾಗಿ ಹಲ್ಲೆ ಮಾಡಿದ್ದಾರೆ. ಅಲ್ಲದೆ ಇನ್ನೋವಾ ಕಾರನ್ನು ಜಖಂಗೊಳಿಸಿ ನಷ್ಟ ಉಂಟುಮಾಡಿರುತ್ತಾರೆ. ಹಲ್ಲೆಯ ಪರಿಣಾಮ ಗಾಯಗೊಂಡ ಅವರು ಪುತ್ತೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿದ್ದಾರೆ. ಘಟನೆ ಸಂಬಂಧಿಸಿದಂತೆ ಪುತ್ತೂರು ಪೊಲೀಸರು ತಮ್ಮ ಮಿಂಚಿನ ಕಾರ್ಯಚರಣೆ ಮೂಲಕ 6 ಜನ ಆರೋಪಿಗಳನ್ನು ಕೇವಲ 30 ನಿಮಿಷಗಳಲ್ಲಿ ಬಂಧಿಸಿದರು.