ಬಂಟ್ವಾಳ: ಕೆಎಸ್‌ಆರ್‌ಟಿಸಿಯ ಐಸಿಯು ಬಸ್ ಸೇವೆ, ಕೋವಿಡ್ ವ್ಯಾಕ್ಸಿನ್ ನೀಡಿಕೆ ಹಾಗೂ ಕಾರ್ಮಿಕ ಇಲಾಖೆಯಿಂದ ನೀಡುವ ಆಹಾರದ ಕಿಟ್‌ನಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಮಾಜಿ ಸಚಿವ ಬಿ. ರಮಾನಾಥ ರೈ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಆ.31ರಂದು ಬಿ.ಸಿ. ರೋಡಿನ ಮಿನಿವಿಧಾನ ಸೌಧದಲ್ಲಿರುವ ತಹಶೀಲ್ದಾರ್ ಕಚೇರಿಗೆ ದಿಢೀರ್ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಸರಕಾರದ ಸೌಲಭ್ಯಗಳು ನೀಡಿಕೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರೆಂದು ತಾರತಮ್ಯ ಮಾಡಲಾಗುತ್ತಿದೆ. ಆಹಾರದ ಕಿಟ್‌ಗಳು ಫಲಾನುಭವಿ ಕಾರ್ಮಿಕರ ಬದಲು ಬಿಜೆಪಿ ಕಾರ್ಯಕರ್ತರ ಪಾಲಾಗುತ್ತಿದೆ. ಈ ಸಮಸ್ಯೆಯನ್ನು ತಕ್ಷಣ ಪರಿಹರಿಸಿ ಎಲ್ಲರಿಗೂ ಸಮಾನವಾಗಿ ಸೌಲಭ್ಯಗಳು ಸಿಗಬೇಕು, ಈ ಅನ್ಯಾಯವನ್ನು ತಕ್ಷಣ ನಿಲ್ಲಿಸಬೇಕು ಎಂದು ಮಾಜಿ ಸಚಿವ ಬಿ. ರಮಾನಾಥ ರೈ ತಹಶೀಲ್ದಾರ್ ಅವರನ್ನು ಆಗ್ರಹಿಸಿದರು. ತಾರತಮ್ಯ ನೀತಿ ಅನುಸರಿಸಲು ಪ್ರಚೋದನೆ ನೀಡುತ್ತಿರುವ ಶಾಸಕ ರಾಜೇಶ್ ನಾಯ್ಕ್, ಕಾರ್ಮಿಕ ಇಲಾಖೆ, ಆರೋಗ್ಯ ಇಲಾಖೆಗೆ ಕಾಂಗ್ರೆಸ್ ಕಾರ್ಯಕರ್ತರು ಧಿಕ್ಕಾರ ಕೂಗಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೋವಿಡ್ ಸಮಯದಲ್ಲಿ ಕಾಂಗ್ರೆಸ್ ಪಕ್ಷ ನಿಕ್ಷ್‌ಪಕ್ಷಪಾತವಗಿ ಕೊರೊನಾ ಸೋಕಿಂತರಿಗೆ ವಿಶೇಷ ಕಿಟ್ ನೀಡಿದ್ದೇವೆ. ಆದರೆ ಪ್ರಸ್ತುತ ಸರ್ಕಾರದ ಕೆಎಸ್‌ಆರ್‌ಟಿಸಿಯ ಐಸಿಯು ಬಸ್ಸು ಬಂಟ್ವಾಳ ವಿಧಾನಸಭಾ ಕೇತ್ರ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದು ಬಿಜೆಪಿ ಅಧಿಕಾರದಲ್ಲಿರುವ ಪಂಚಾಯತ್‌ಯಲ್ಲಿ ಆರೋಗ್ಯ ಸೇವೆ ನೀಡಲಾಗುತ್ತಿದೆ, ಬಿಜೆಪಿ ಅಧಿಕಾರದಲ್ಲಿಲ್ಲದ ಪಂಚಾಯತ್‌ಗಳಲ್ಲಿ ಬಿಜೆಪಿ ಕಾರ್ಯಕರ್ತನ ಮನೆಯಲ್ಲಿ ನೀಡಲಾಗುತ್ತದೆ. ಇದು ನ್ಯಾಯವೇ? ಎಂದು ರೈ ಪ್ರಶ್ನಿಸಿದರು. ೨ ಸಾವಿರ ರೂಪಾಯಿ ಬೆಲೆಬಾಳುವ ಆಹಾರದ ಕಿಟ್ ಕಾರ್ಮಿಕರಿಗೆ ಸರಕಾರ ನೀಡಿದೆ. ಪಂಚಾಯತ್ ಮೂಲಕ ನೀಡಬೇಕಾದ ಈ ಆಹಾರದ ಕಿಟನ್ನು ಖಾಸಗಿ ವ್ಯಕ್ತಿಗಳ ಮನೆಯಲ್ಲಿ ವಿತರಿಸಲಾಗುತ್ತಿದೆ.

2 ಸಾವಿರ ರೂಪಾಯಿ ಮೌಲ್ಯದ ಕಿಟ್‌ನಲ್ಲಿ ಗೋಲ್‌ಮಾಲ್ ನಡೆದಿದ್ದು ಈಗ 700 ರೂಪಾಯಿಯ ವಸ್ತುಗಳು ಮಾತ್ರ ಇದೆ ಎಂದು ಆರೋಪಿಸಿದ ಅವರು ಈ ವಸ್ತುಗಳನ್ನು ಯಾರು ತಿಂದಿದ್ದಾರೆ ? ಎನ್ನುವುದು ತನಿಖೆಯಾಗಬೇಕೆಂದು ಆಗ್ರಹಿಸಿದರು. ರಾಜಾಧರ್ಮ ಹೇಳುವವರು ಮಾಡುವುದು ಅನ್ಯಾಯ, ರಾಜಕೀಯ ಮಾಡುವುದು ರಾಜಧರ್ಮವಲ್ಲ, ಎಲ್ಲಾ ವರ್ಗದವರನ್ನು ಸಮಾನವಾಗಿ ಕಾಣುವುದೇ ರಾಜಧರ್ಮ. ಅಧಿಕಾರಿಗಳು ತಪ್ಪು ಮಾಡಿದರೆ ನಮ್ಮ ಹೋರಾಟ ಎಂದಿಗೂ ಇದೆ ಎಂದು ಎಚ್ಚರಿಸಿದರು. ಆಹಾರದ ಕಿಟ್ಟನ್ನು ಸರಕಾರದ ನಿಯಾಮವಳಿಯಂತೆ ಪಂಚಾಯತಿಗಳಲ್ಲಿಯೇ ನೀಡಬೇಕು, ತೆರಿಗೆಯನ್ನು ಪ್ರತಿಯೊಬ್ಬ ವ್ಯಕ್ತಿಯೂ ಪಾವತಿಸುತ್ತಿದ್ದು ಪ್ರತಿಯೊಬ್ಬ ಅರ್ಹ ಫಲಾನುಭವಿಗೆ ಕಿಟ್ ನೀಡಬೇಕು, ಸಕಾಋದ ಕಿಟ್ಟನ್ನು ಅವರ ಮನೆಯಿಂದ ಕೊಡುವುದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶಕ್ತಿಕೇಂದ್ರದವರು ಕರೆ ಮಾಡಿ ಹೇಳಿದವರಿಗೆ ಮಾತ್ರ ೯೪ಸಿ ಯಡಿ ಹಕ್ಕು ಪತ್ರ ನೀಡಲಾಗುತ್ತಿದೆ. ಈ ಅವ್ಯವಸ್ಥೆಯನ್ನು ಖಂಡಿಸುವುದಾಗಿ ತಿಳಿಸಿದ ಅವರು ಸರಕಾರದ ಸೌಲಭ್ಯಗಳು ರಾಜಕೀಯ ರಹಿತವಾಗಿ ಪ್ರತಿಯೊಬ್ಬ ಬಡವನಿಗೂ ನ್ಯಾಯೋಚಿತವಾಗಿ ಸಿಗಬೇಕು ಎಂದು ಒತ್ತಾಯಿಸಿದರಲ್ಲದೆ, ಈ ಅವ್ಯವಸ್ಥೆ ಸರಿಪಡಿಸುವಂತೆ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗಿದೆ, ಇದೇ ರೀತಿ ಮುಂದುವರಿದರೆ ಬಸ್ಸಿನಡಿ ಮಲಗಿ ಪ್ರತಿಭಟಿಸುವುದಾಗಿ ಬಿ. ರಮಾನಾಥ ರೈ ಎಚ್ಚರಿಸಿದರು. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಸರಿಯಾದ ಸ್ಪಂದನೆ ಸಿಗದ ಕಾರಣ ಅನಿವಾರ್ಯವಾಗಿ ಪ್ರತಿಭಟನೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಮುಖಂಡರಾದ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ ಜೈನ್, ಬೇಬಿ ಕುಂದರ್, ಸುದೀಪ್ ಕುಮಾರ ಶೆಟ್ಟಿ, ಜಯಂತಿ ಪುಜಾರಿ, ಅಬ್ಬಾಸ್ ಅಲಿ, ಸುದರ್ಶನ್ ಜೈನ್, ಮಹಮ್ಮದ್ ಶರೀಫ್, ಮಾಯಿಲಪ್ಪ ಸಾಲ್ಯಾನ್, ಜನಾರ್ಧನ ಚೆಂಡ್ತಿಮಾರ್, ಗಂಗಾಧರ್ ಪೂಜಾರಿ, ಸದಾಶಿವ ಬಂಗೇರ, ಪ್ರಶಾಂತ್ ಕುಲಾಲ್, ಮಧುಸೂದನ್ ಶೆಣೈ, ಯೂಸುಫ್ ಕರಂದಾಡಿ, ಇಬ್ರಾಹಿಂ ನವಾಝ್, ಆಲ್ಬರ್ಟ್ ಮಿನೇಜಸ್, ಮಹಮ್ಮದ್ ನಂದಾವರ, ಸಂಪತ್ ಕುಮಾರ್ ಶೆಟ್ಟಿ , ಸಿದ್ದಿಕ್ ಗುಡ್ಡೆಯಂಗಡಿ, ಮತ್ತಿತರರು ಉಪಸ್ಥಿತರಿದ್ದರು.
