ವಿಟ್ಲ: ಸುಮಾರು 50 ವರ್ಷಗಳ ವಿಟ್ಲ ತಾಲೂಕು ರಚನೆಯ ಕನಸು ನನಸು ಆಗುವ ಸಮಯ ಕೂಡಿಬರುವ ವಿಶ್ವಾಸ ವಿಟ್ಲದ ಜನತೆಯ ಮನಸ್ಸಿನಲ್ಲಿ ಮೂಡಿಬಂದಿದೆ. ಕಳೆದ ಒಂದು ತಿಂಗಳಿಂದ ವಿಟ್ಲದ ಉತ್ಸಾಹಿ ಯುವಕರ ತಂಡ ವಿಟ್ಲ ತಾಲೂಕು ರಚನೆಯ ಬಗ್ಗೆ ಆಸಕ್ತಿ ತೋರಿ ಜನತೆಯ ಅಭಿಪ್ರಾಯ ಸಂಗ್ರಹಿಸಿದಾಗ ಉತ್ತಮ ರೀತಿಯ ಸ್ಪಂದನೆ ದೊರಕಿದ್ದು, ಈ ಬಗ್ಗೆ ಯುವಕರ ತಂಡ ವಿಟ್ಲ ತಾಲೂಕು ರಚನೆಯ ಬಗ್ಗೆ ಸುದೀರ್ಘ ಹೋರಾಟ ಮಾಡಿದ್ದ ಮುರುವ ಮಹಾಬಲ ಭಟ್ ಹಾಗೂ ವಿಟ್ಲ ಕ್ಷೇತ್ರದ ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ ಅವರನ್ನು ಭೇಟಿಯಾಗಿ ಚರ್ಚಿಸಿ ಅವರುಗಳ ಸಲಹೆಯಂತೆ ಸುಮಾರು 29 ಗ್ರಾಮಗಳು ಸೇರಿರುವ ನಕ್ಷೆ ರಚನೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಅತಿದೊಡ್ಡ ತಾಲೂಕು ಆಗಿರುವ ಬಂಟ್ವಾಳ ಈಗಾಗಲೇ 75 ಗ್ರಾಮಗಳನ್ನು ಹೊಂದಿದ್ದು 3.50 ಲಕ್ಷಕ್ಕಿಂತಲೂ ಅಧಿಕ ಜನಸಂಖ್ಯೆಯನ್ನು ಹೊಂದಿದೆ. ಭೌಗೋಳಿಕವಾಗಿ ಅತ್ಯಂತ ವಿಶಾಲ ಆಗಿರುವ ಈ ತಾಲೂಕು ವಿಭಜನೆ ಆಗಿ ವಿಟ್ಲ ತಾಲೂಕು ರಚನೆ ಆಗಬೇಕೆಂದು ಜನರ ಆಶಯವಾಗಿದೆ.
ಈ ನಿಟ್ಟಿನಲ್ಲಿ ವಿಟ್ಲ ಭಾಗದ ಪ್ರಮುಖರಾದ ಮೋಹನದಾಸ್ ಉಕ್ಕುಡ, ಕೃಷ್ಣಯ್ಯ ವಿಟ್ಲ ಅರಮನೆ, ಜಗನ್ನಾಥ ಕಾಸರಗೋಡು, ಶ್ರೀಕೃಷ್ಣ ವಿಟ್ಲ, ಪುನೀತ್ ಮಾಡತ್ತಾರ್, ಉದಯ ಕುಮಾರ್ ಆಲಂಗಾರ್, ಪದ್ಮನಾಭ ಕಟ್ಟೆ, ವಿಶ್ವನಾಥ ವೀರಕಂಭ, ಶರತ್ ಎನ್ಎಸ್, ರಾಜೇಶ್ ವಿಟ್ಲ, ಶಿವಪ್ರಸಾದ್ ಶೆಟ್ಟಿ ಕರೋಪಾಡಿ ಮುಂತಾದವರು ನೇತೃತ್ವದಲ್ಲಿ ಸಮಿತಿಯ ರಚನೆಯ ಕಾರ್ಯ ನಡೆಯುತ್ತಿದ್ದು ಪೂರಕವಾದ ದಾಖಲೆಗಳ ಸಂಗ್ರಹಗಳು ಆಗಿದೆ. ಅತಿ ಶೀಘ್ರದಲ್ಲಿ ವಿಟ್ಲ ತಾಲೂಕು ರಚನಾ ಸಮಿತಿಯ ಸಭೆ ಸೇರಿ ನೂತನ ಸಮಿತಿ ರಚನೆಯಾಗಲಿದೆ.
ಪುತ್ತೂರಿನ ಶಾಸಕರಾದ ಸಂಜೀವ ಮಠಂದೂರು ರವರು ವಿಟ್ಲ ತಾಲೂಕು ರಚನೆಯ ಬಗ್ಗೆ ಪೂರಕವಾಗಿ ಸ್ಪಂದಿಸಿ ಈ ವಿಚಾರಕ್ಕೆ ತನ್ನ ಸಂಪೂರ್ಣ ಬೆಂಬಲವನ್ನು ನೀಡುವುದಾಗಿ ತಿಳಿಸಿದ್ದು, ಪ್ರಸ್ತಾವಿತ ವಿಟ್ಲ ತಾಲೂಕಿಗೆ ಒಳಪಡುವ ಗ್ರಾಮಗಳು ವಿಟ್ಲ, ಅಳಿಕೆ, ಪೆರುವಾಯಿ, ಮಾಣಿಲ, ಕೇಪು, ಪುಣಚ, ವಿಟ್ಲ ಮುಡ್ನೂರು, ಕುಳ, ಇಡ್ಕಿದು, ನೆಟ್ಲ ಮುಡ್ನೂರು, ಅನಂತಾಡಿ, ಮಾಣಿ, ಪೆರಾಜೆ, ಬೊಳಂತೂರು, ವೀರಕಂಭ, ವಿಟ್ಲ ಪಡ್ನೂರು, ಕೊಳ್ನಾಡು, ಸಾಲೆತ್ತೂರು, ಕನ್ಯಾನ, ಕರೋಪಾಡಿ, ಕೆದಿಲ, ಬಿಳಿಯೂರು, ಪೆರ್ನೆ, ಬರಿಮಾರು, ಬಾಳ್ತಿಲ, ಗೊಳ್ತಮಜಲು, ಅಮ್ಟೂರು, ಮಂಚಿ, ಕಡೇಶ್ವಾಲ್ಯ
ಒಟ್ಟು ಗ್ರಾಮಗಳು 29, ಜನಸಂಖ್ಯೆ 1,57,037 (2011 ರ ಜನಗಣತಿಯಂತೆ) ಪ್ರಸ್ತಾವಿತ ವಿಟ್ಲ ತಾಲೂಕಿನ ಜನಸಂಖ್ಯೆಯು ಇತ್ತೀಚೆಗೆ ರಚನೆ ಆದ ಕಡಬ, ಮೂಡುಬಿದಿರೆ, ಮುಲ್ಕಿ ತಾಲೂಕಿಗಿಂತ ಹೆಚ್ಚಿದೆ.