ಪುತ್ತೂರು: ಸುಳ್ಳು ಪ್ರಮಾಣ ಪತ್ರ ನೀಡಿ ಮೌರಿಸ್ ಮಸ್ಕರೇನಿಯಸ್ ಎಂಬವರು ಮಾಯಿದ ದೇವುಸ್ ಚರ್ಚ್ ನ ಪಾಲನ ಸಮಿತಿಯ ಉಪಾಧ್ಯಕ್ಷ ಹುದ್ದೆಯನ್ನು ಪಡಕೊಂಡಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಪುತ್ತೂರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದು ಈ ಬಗ್ಗೆ ತನಿಖೆ ನಡೆಸುವಂತೆ ನ್ಯಾಯಾಲಯವೂ ಪುತ್ತೂರು ನಗರ ಪೊಲೀಸರಿಗೆ ಆದೇಶಿಸಿದೆ.
ಮಾಯಿದ ದೇವುಸ್ ಚರ್ಚ್‍ನ ಸದಸ್ಯರು, ಪಾಲನ ಸಮಿತಿಯ ಉಪಾಧ್ಯಕ್ಷರಾಗಿ 2 ಭಾರಿ ಮತ್ತು ಮಾಜಿ ಕಾರ್ಯದರ್ಶಿಯಾಗಿ 4 ಭಾರಿ ಕರ್ತವ್ಯ ನಿರ್ವಹಿಸಿದ್ದ ಜೋಸೆಫ್ ಡಿ ಸೋಜರವರು ನ್ಯಾಯಾಲಯದಲ್ಲಿ ದೂರು ದಾಖಲಿಸಿದವರು.
ಪುತ್ತೂರು ಮಾಯಿದ ದೇವುಸ್ ಚರ್ಚ್ ನ ಪಾಲನ ಸಮಿತಿಯ 2020-2022 ರ ಅವಧಿಗೆ ಉಪಾಧ್ಯಕ್ಷ ಹುದ್ದೆಯನ್ನು ಪಡೆಯುವ ಉದ್ದೇಶದಿಂದ ಮೌರಿಸ್ ಮಸ್ಕರೇನಿಯಸ್ ಎಂಬುವವರು 1977-78 ನೇ ಶೈಕ್ಷಣಿಕ ವರ್ಷದಲ್ಲಿ ತಾನೂ ಎಸ್.ಎಸ್.ಎಲ್.ಸಿ ತೇರ್ಗಡೆಯಾಗಿರುವುದಾಗಿ ಮಾಹಿತಿ ನೀಡಿದ್ದಾರೆ. ಆದರೆ ಪ್ರಸ್ತುತ ಎಸ್.ಎಸ್.ಎಲ್.ಸಿ ತೇರ್ಗಡೆಯಾದ ಪಾಸಿಂಗ್ ಸರ್ಟಿಫಿಕೇಟ್ ಕಳೆದುಹೊಗಿದೆ ಎಂಬುದಾಗಿ ನೋಟರಿಯವರ ಮುಂದೆ 01-01-2020 ರಂದು ಒಂದು ಸುಳ್ಳು ಪ್ರಮಾಣ ಮಾಡಿ ಪ್ರಮಾಣಪತ್ರವನ್ನು ಮಾಡಿಸಿ ಅದರ ಆಧಾರದಲ್ಲಿ ಚರ್ಚನ ಉಪಾಧ್ಯಕ್ಷ ಹುದ್ದೆಯನ್ನು ಪಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಮೂಲಕ ಮೋಸ ಮತ್ತು ವಂಚನೆಯನ್ನು ಮೌರಿಸ್ ಮಸ್ಕರೇನಿಯಸ್ ರವರು ಎಸಗಿದ್ದು ಇದು ಭಾರತೀಯ ದಂಡ ಸಂಹಿತೆಯ ಕಲಂ. 191,192, 193, 197, 198, 199, 406, 417 ಮತ್ತು 420 ರಡಿ ಅಪರಾಧ ಎಂಬುದಾಗಿ ಆರೋಪಿಸಲಾಗಿದೆ.
ಜೊಸೇಫ್ ಡಿ ಸೋಜರವರು ಈ ಹಿಂದೆ ಪುತ್ತೂರು ನಗರ ಠಾಣೆಗೆ ಈ ಬಗ್ಗೆ ದೂರು ನೀಡಿದ್ದರು. “ನಿಮ್ಮ ಧರ್ಮದ ಮುಖಂಡರೊಂದಿಗೆ ಚರ್ಚಿಸಿ ಅಥವಾ ಸಂಬಂಧಪಟ್ಟ ಪ್ರಾಧಿಕಾರದಲ್ಲಿ ವ್ಯವಹರಿಸಿ ಇತ್ಯರ್ಥಪಡಿಸಿಕೊಳ್ಳುವಂತೆ ಈ ಬಗ್ಗೆ ಪುತ್ತೂರು ನಗರ ಠಾಣೆಯಿಂದ ಹಿಂಬರಹ ನೀಡಲಾಗಿತ್ತು.
ಬಳಿಕ ಜೋಸೆಫ್ ರವರು ಚಾಣಕ್ಯ ಲಾ ಚೇಂಬರ್ಸ್ ನ ನ್ಯಾಯವಾದಿ ಶ್ಯಾಮ್ ಪ್ರಸಾದ್ ಕೈಲಾರ್ ರವರ ಮೂಲಕ ಮಾನ್ಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಖಾಸಗಿ ದೂರನ್ನು ದಾಖಲಿಸಿದ್ದರು. ದೂರುದಾರರ ಪರ ವಾದ ಆಲಿಸಿದ ಮಾನ್ಯ ನ್ಯಾಯಾಲಯ ಈ ಕುರಿತಂತೆ ತನಿಖೆ ನಡೆಸಲು ಪುತ್ತೂರು ನಗರ ಠಾಣಾಧಿಕಾರಿಗಳಿಗೆ ಆದೇಶಿಸಿದೆ.