ಬೆಳ್ತಂಗಡಿ: ಅಕ್ರಮ ಜಾಗದಲ್ಲಿರುವ ದೇವಸ್ಥಾನಗಳನ್ನು ತೆರವುಗೊಳಿಸುವಂತೆ ಸುಪ್ರಿಂ ಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಹಿಂದೂ ದೇವಾಲಯಗಳನ್ನು ಕೆಡವುತ್ತಿರುವ ಸರಕಾರದ ವಿರುದ್ದ ಬೆಳ್ತಂಗಡಿ ತಾಲೂಕು ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆ ವತಿಯಿಂದ ತಾಲೂಕು ಮಿನಿ ವಿಧಾನ ಸೌಧದಲ್ಲಿ ಸೆ. 23 ರಂದು ಬೃಹತ್ ಹಿಂದೂ ಜನಜಾಗೃತಿ ಸಭೆ ನಡೆಯಿತು.

ಕಾರ್ಯಕ್ರಮಕ್ಕೆ ಮುಂಚಿತವಾಗಿ ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಬೆಳ್ತಂಗಡಿ ಅಯ್ಯಪ್ಪ ಮಂದಿರದ ಬಳಿಯಿಂದ ತಾಲೂಕು ಮಿನಿ ವಿಧಾನ ಸೌದದ ವರೆಗೆ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಯಿತು.
ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆ ಸ್ಥಾಪಕಾಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿಯವರು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ಕೆಟ್ಟ ಜನರಿಗೆ ಬಳಸುವಂತ ಪದಗಳನ್ನು ಬಳಸಿದರೇ ಮಾತ್ರ ಇವರಿಗೆ ಬುದ್ಧಿ ಬರುತ್ತದೆ. ಇಲ್ಲಂದ್ರೇ ಇವರಿಗೆ ಬುದ್ಧಿ ಬರುವುದಿಲ್ಲ. ನಾಯಿಯ ಬಾಲವನ್ನು ಹಂಡೆಯಲ್ಲಿ ಹಾಕಿದರೇ ಹೇಗೆ ಸರಿಯಾಗುವುದಿಲ್ಲ ಹಾಗೆಯೇ ಬದುಕುವವರು ಇವರು. ಹಿಂದುತ್ವದ ಹೆಸರಿನ ಆಧಾರದಲ್ಲಿ ಗಳಿಸಿದಂತಹ ಮತದಲ್ಲಿ ಗೆದ್ದು ಬಂದಂತಹ ಈ ರಾಷ್ಟ್ರೀಯ ಪಕ್ಷದ ಜವಾಬ್ದಾರಿ ಸ್ಥಾನವನ್ನು ಹೊಂದಿದಂತಹ ಮುಖ್ಯಮಂತ್ರಿಗಳು, ಶಾಸಕರು, ಸಂಸದರು ಎಲ್ಲರೂ ಸೇರಿಕೊಂಡು ಮೊಘಲರ ಕಾಲದಲ್ಲಿ, ಖಿಲ್ಜಿಗಳ ಕಾಲದಲ್ಲಿ, ಬ್ರಿಟಿಷರ ಕಾಲದಲ್ಲಿ ನಡೆಯದ ಕೆಲಸವನ್ನು ಮಾಡಿ ತೋರಿಸಿದ್ದಾರೆ.

ಸ್ವಾತಂತ್ರ್ಯ ಸಿಕ್ಕ ನಂತರ 65 ವರ್ಷಗಳ ಆಳ್ವಿಕೆ ನಡೆಸಿದ ರಾಷ್ಟ್ರೀಯ ಕಾಂಗ್ರೆಸ್ ದೇವಸ್ಥಾನವನ್ನು ಒಡೆದಂತಹ ಘಟನೆಯನ್ನು ನಾನು ಎಲ್ಲಿಯೂ ಕೇಳಲಿಲ್ಲ . ಸುಪ್ರಿಂ ಕೋರ್ಟ್ ಆದೇಶ ಪಾಲನೆಯ ನೆಪದಲ್ಲಿ ಹಿಂದುತ್ವದ ಹೆಸರಿನಲ್ಲಿ ಅಧಿಕಾರ ಪಡೆದು ಹಿಂದೂಗಳ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಮೇಲೆ ಸರಕಾರ ಧಾಳಿ ಮಾಡುತ್ತಿದೆ. 2012ರಲ್ಲಿ ಸೌಜನ್ಯ ಕೊಲೆ ಆದ ಬಳಿಕ ಬಿಜೆಪಿಗೆ ಶಾಪ ತಟ್ಟಿದು, ಬಿಜೆಪಿಯ ನಾಯಕರ ಅತ್ಯಾಚಾರದ ಸುರಿಮಳೆ ಶುರುವಾಗಿದೆ ಎಂದರು.
ಮೈಸೂರು ಜಿಲ್ಲಾಡಳಿತವು ಇತಿಹಾಸ ಪ್ರಸಿದ್ಧ ದೇವಸ್ಥಾನವನ್ನು ರಾತ್ರೋ ರಾತ್ರಿ ಕೆಡವಿ ಹಾಕಿ ಹಿಂದೂ ಸಮಾಜ ಬಾಂಧವರ ಮನಸ್ಸಿಗೆ ನೋವಾಗುವ ರೀತಿಯಲ್ಲಿ ವರ್ತಿಸಿದೆ. ಇದೇ ರೀತಿ ಮುಂದುವರಿದಲ್ಲಿ ರಾಜ್ಯದಾದ್ಯಂತ ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದರು.

ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆ ಗೌರವಾಧ್ಯಕ್ಷ ಹರೀಶ್ ಬರೆಮೇಲು, ಅಧ್ಯಕ್ಷ ಅನಿಲ್ ಕುಮಾರ್, ಕಾರ್ಯದರ್ಶಿ ಸಂದೀಪ್, ಸಂಚಾಲಕ ಮನೋಜ್ ಕುಂಜರ್ಪ, ಪ್ರಮುಖರಾದ ಪ್ರಜ್ವಲ್, ಚಂದ್ರಹಾಸ ಜಿಕೆರೆ, ವೆಂಕಪ್ಪ ಕೋಟ್ಯಾನ್, ಮನೋಹರ ಕನ್ಯಾಡಿ, ಪ್ರಮೋದ್ ಸಾಲ್ಯಾನ್, ನಿಡ್ಲೆ ಗ್ರಾ.ಪಂ ಸದಸ್ಯ ಜಗದೀಶ್ ನಿಡ್ಲೆ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
