ಮಂಡ್ಯ: ಜಿಲ್ಲೆಯ ಸಂತೇ ಬಾಚಹಳ್ಳಿ ಗ್ರಾಮದಲ್ಲಿ ಸರ್ಕಾರಿ ಉರ್ದು ಶಾಲೆಯೊಂದು ಮಸೀದಿಯಾಗಿ ಬದಲಾದ ಘಟನೆ ವರದಿಯಾಗಿದೆ. ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ಸಂತೇ ಬಾಚಹಳ್ಳಿ ಗ್ರಾಮದಲ್ಲಿ 45 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಸರ್ಕಾರಿ ಉರ್ದು ಶಾಲೆಯೊಂದು 20 ವರ್ಷಗಳ ಹಿಂದೆ ಬಿಸಿಯೂಟದ ಅಡುಗೆ ಮನೆ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಹೊಂದಿತ್ತು ಆದರೆ ಮಕ್ಕಳ ಹಾಜರಾತಿ ಕೊರತೆಯಿಂದಾಗಿ ಕೆಲವು ವರ್ಷಗಳ ಹಿಂದೆ ಶಾಲೆ ಮುಚ್ಚಿತ್ತು.

ಈ ವೇಳೆ ಹೊರಗಿನಿಂದ ಬಂದಿರುವ ಕೆಲ ಅನ್ಯಕೋಮಿನ ಧಾರ್ಮಿಕ ಮುಖಂಡರು ಸರ್ಕಾರಿ ಉರ್ದು ಶಾಲೆಯಲ್ಲಿ ಅತಿಕ್ರಮಣ ಮಾಡಿದ್ದು, ಶಾಲೆಗೆ ಹಸಿರು ಬಣ್ಣ ಬಳಿದು ಬಾಬಯ್ಯನ ದೇಗುಲವಾಗಿ ಮಾರ್ಪಾಡು ಮಾಡಿದ್ದಾರೆ. ಇವರ ಈ ಕೃತ್ಯಕ್ಕೆ ಸ್ಥಳೀಯ ಗ್ರಾಮ ಪಂಚಾಯಿತಿಯು ಕೂಡ ಸಾಥ್ ನೀಡಿದೆ ಎಂಬ ಆರೋಪ ಕೇಳಿ ಬಂದಿದೆ.

ಸರ್ಕಾರಿ ಶಾಲೆಯನ್ನ 2021ರ ಜೂನ್ನಲ್ಲಿ ಧಾರ್ಮಿಕ ಕೇಂದ್ರದ ಆಸ್ತಿಯನ್ನಾಗಿ ಪಂಚಾಯತಿ ಈ ಸ್ವತ್ತು ಮಾಡಿಕೊಟ್ಟಿದೆ. ಸರ್ಕಾರಿ ಶಾಲೆ ಪ್ರಾರ್ಥನಾ ಮಂದಿರವಾಗಿ ಬದಲಾಗಿರೋದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳೀಯರ ಆಕ್ರೋಶ ಬೆನ್ನಲ್ಲೇ ಅಧಿಕಾರಿಗಳು ಗ್ರಾಮಕ್ಕೆ ದೌಡಾಯಿಸಿದ್ದು ವಿಷಯ ತಿಳಿಯುತ್ತಿದ್ದಂತೆ ಧಾರ್ಮಿಕ ಮುಖಂಡರು ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದ್ದು ಶಾಲೆಯಲ್ಲಿ ನಿರ್ಮಾಣವಾಗಿದ್ದ ಪ್ರಾರ್ಥನಾ ಮಂದಿರವನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ.