ಬಂಟ್ವಾಳ: ಬಿರುವೆರ್ ಕುಡ್ಲ ಇದರ ಮಹಾ ಸೇವಾ ಯೋಜನೆಯ ಅಂಗವಾಗಿ ಬಂಟ್ವಾಳದ ಭಂಡಾರಿ ಬೆಟ್ಟುವಿನಲ್ಲಿ ಬಡಕುಟುಂಬದ ಲಿಂಗಪ್ಪ ದಂಪತಿಗಳಿಗೆ ಸುಸಜ್ಜಿತ ಮನೆ ನಿರ್ಮಿಸಿದ್ದು, ಇದರ ಹಸ್ತಾಂತರ ಕಾರ್ಯಕ್ರಮವು ಅ.20 ರಂದು ನಡೆಯಿತು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರವರು ಮನೆ ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಅವರು, ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯಪೂಜಾರಿ ನೇತೃತ್ವದಲ್ಲಿ ಸಂಘಟನೆಯ ಯುವಕರು ಮಾದರಿ ಕೆಲಸ ಮಾಡುತ್ತಿದ್ದಾರೆ. ಯಾವುದೇ ಒಳ್ಳೆಯ ಕೆಲಸ ಮಾಡುವಾಗ ಟೀಕೆ ಸಹಜ.ಅದನ್ನು ಎದುರಿಸಿಕೊಂಡೇ ಇಂದು ಈ ಸಂಘಟನೆ ಈ ಮಟ್ಟಕ್ಕೆ ಬೆಳೆದಿದೆ. ಬಡವರಿಗೆ ಸೇವೆ ಮಾಡುವುದೂ ಕೂಡ ದೇವರ ಪೂಜಾ ಕಾರ್ಯ ಎನಿಸಿಕೊಳ್ಳುತ್ತದೆ.ಸರಕಾರ ಮಾಡಬೇಕಾದ ಕೆಲಸ ಬಿರುವೆರ್ ಕುಡ್ಲದಿಂದ ನಡೆದಿದೆ.ಈ ಸಂಘಟನೆ ರಾಜ್ಯ ಮಟ್ಟದಲ್ಲಿ ಬೆಳೆಯಲಿ ಎಂದು ಹಾರೈಸಿದರು.
ಬಿಜೆಪಿ ದ.ಕ ಜಿಲ್ಲಾಧ್ಯಕ್ಷ ಸುದರ್ಶನ್ , ಬಂಟ್ವಾಳ ಶಾಸಕ ರಾಜೇಶ್ ನಾಯಕ್ ,ನ್ಯಾಯವಾದಿ ಪ್ರಸಾದ್ ಮತ್ತಿತರರು ಶುಭ ಹಾರೈಸಿದರು. ಬಿರುವೆರ್ ಕುಡ್ಲದ ಮಹಿಳಾ ಘಟಕ ಸಹಿತ 22 ಘಟಕಗಳು ಸಂಯುಕ್ತವಾಗಿ ಸೇರಿ ಈ ಮಹಾ ಸೇವಾ ಯೋಜನೆ ಕಾರ್ಯ ಹಮ್ಮಿಕೊಂಡಿದೆ. ಬಂಟ್ವಾಳದಲ್ಲಿ ನಿರ್ಮಿಸಿದ ಮನೆ 5ನೇಯದ್ದಾಗಿದೆ.ಇದರ ಜತೆಗೆ 500ಕ್ಕೂ ಅಧಿಕ ಸಮಾಜಮುಖೀ ಸೇವಾ ಯೋಜನೆ ಮಾಡಿದೆ.ಉದಯ ಪೂಜಾರಿ ನೇತೃತ್ವದಲ್ಲಿ ಪ್ರಧಾನ ಸಂಘಟನೆ ಈಗಾಗಲೇ ಅಂದಾಜು 2 ಕೋಟಿಗೂ ಮಿಕ್ಕಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬದ ಆರೋಗ್ಯ ಚಿಕಿತ್ಸೆಗೆ,ವಿಕಲ ಚೇತನರಿಗೆ ಗಾಲಿ ಕುರ್ಚಿ,ಶಿಕ್ಷಣಕ್ಕೆ ಮತ್ತಿತರ ಯೋಜನೆಗೆ ವಿತರಿಸಿದೆ.ಸಂಘಟನೆಯ ಸದಸ್ಯರ,ದಾನಿಗಳ ನೆರವಿನಿಂದ ನಿರಂತರವಾಗಿ ಸಮಾಜದಲ್ಲಿ ಕಳೆದ 7 ವರ್ಷಗಳಲ್ಲಿ ಸೇವಾ ನಿರತವಾಗಿದೆ.
ಕಾರ್ಯಕ್ರಮದಲ್ಲಿ ಬುಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಬಿಜೆಪಿ ಮುಂದಾಳು ವಸಂತ ಪೂಜಾರಿ, ಬಿರುವೆರ್ ಕುಡ್ಲ ಸ್ಥಾಪಕ ಉದಯಪೂಜಾರಿ, ಬಿರುವೆರ್ ಕುಡ್ಲ ಸಂಘಟನಾಧ್ಯಕ್ಷ ಚಂದ್ರಶೇಖರ್ ಅಮೀನ್, ಸಂಘಟಕ ಚಂದ್ರಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಬಿರುವೆರ್ ಕುಡ್ಲಕ್ಕೆ ನೆರವು ನೀಡಿದ ವೆಂಕಟೇಶ್ ಹಾಗೂ ಲಕ್ಷ್ಮಣ ಶೆಟ್ಟಿ ಅವರನ್ನು ಗೌರವಿಸಲಾಯಿತು. ನೆರವು ನೀಡಿದ ದಾನಿಗಳನ್ನು ಗೌರವಿಸಲಾಯಿತು. ಸಂಘಟನೆಯ ಮುಂದಾಳು ನ್ಯಾಯವಾದಿ ಚಂದ್ರಶೇಖರ್ ನೆರವು ನೀಡಿದವರ ವಿವರ ನೀಡಿದರು. ಲಕ್ಷ್ಮೀಶ್ ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು.