ಬೆಳ್ಳಾರೆ: ಶಾಲೆ ಪ್ರಾರಂಭವಾಗಿದ್ದು, ಶಾಲೆಗೆ ಕೆಸರು ತುಂಬಿದ ಈ ರಸ್ತೆಯಲ್ಲಿ ನಾವು ಹೋಗುವುದಾದರೂ ಹೇಗೆ ಎಂಬ ಚಿಂತೆ ಈ ಪುಟಾಣಿಗಳಿಗೆ. ಆದರೆ ಅವರಿವರ ಬಳಿ ಹೇಳಿ ಪ್ರಯೋಜನವಿಲ್ಲ ಎಂದು 2ನೇ ತರಗತಿಯ ಪುಟಾಣಿಗಳು ತಾವೇ ಹಾರೆ ಹಿಡಿದು ಕೆಸರನ್ನು ಬದಿಗೆ ಸರಿಸಿದ ಘಟನೆ ಬೆಳ್ಳಾರೆ ಗ್ರಾಮದ ಮೂಡಾಯಿ ತೋಟ ಮಂಡೇಪು ಎಂಬಲ್ಲಿ ನಡೆದಿದೆ.
ಬೆಳ್ಳಾರೆ ಗ್ರಾಮದ ಮೂಡಾಯಿ ತೋಟ ಬೆಳ್ಳಾರೆ ರಸ್ತೆಯ ಮಂಡೇಪು ಎಂಬಲ್ಲಿ ಮಣ್ಣಿನ ರಸ್ತೆಯು ಕೆಸರುಮಯವಾಗಿದ್ದು, ನಡೆದುಕೊಂಡು ಹೋಗಲೂ ಅಸಾಧ್ಯವಾಗಿದೆ.
ಇದೀಗ ಪ್ರಾಥಮಿಕ ಶಾಲೆ ಆರಂಭವಾಗಿದ್ದು, ಈ ರಸ್ತೆಯಲ್ಲಿ ನಡೆದುಕೊಂಡು ತಮ್ಮ ಶಾಲಾ ಸಮವಸ್ತ್ರ ಕೆಸರಾಗುವುದು ಗ್ಯಾರಂಟಿ ಎಂದು ತಿಳಿದ 2ನೇ ತರಗತಿಯ ‘ವಲ್ಲೀಶ ರಾಮ ಮತ್ತು ತನ್ವಿ’ ನಮ್ಮ ರಸ್ತೆಯನ್ನು ನಾವೇ ಸರಿಪಡಿಸಿಕೊಳ್ಳುತ್ತೇವೆ ಎಂದುಕೊಂಡು ಹಾರೆ ಹಿಡಿದು ಕೆಸರನ್ನು ಬದಿಗೆ ಸರಿಸಿದರು. ಈ ದೃಶ್ಯ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ..