ಪುತ್ತೂರು: ಕೊಂಬೆಟ್ಟು ಕಾಲೇಜಿನಲ್ಲಿ ನಡೆದಿರುವ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಪ್ರಕರಣವನ್ನು ಎನ್‌ಎಸ್‌ಯುಐ ಖಂಡಿಸಿದ್ದು, ಪುತ್ತೂರಿನ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎನ್‌ಎಸ್‌ಯುಐ ಪುತ್ತೂರು ಘಟಕದ ಅಧ್ಯಕ್ಷ ಕೌಶಿಕ್ ಗೌಡ, ತಮ್ಮ ಮಕ್ಕಳು ಕಲಿತು ಉತ್ತಮ ಉದ್ಯೋಗ ಪಡೆದುಕೊಳ್ಳಬೇಕೆಂಬ ನಿಟ್ಟಿನಲ್ಲಿ ಪೋಷಕರು ವಿದ್ಯಾರ್ಥಿಗಳನ್ನು ಕಾಲೇಜಿಗೆ ಕಳಿಸುತ್ತಾರೆ. ಆದರೆ ಇಲ್ಲಿ ವಿದ್ಯಾರ್ಥಿಗಳನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ. ಈ ಬಗ್ಗೆ ವಿದ್ಯಾರ್ಥಿಗಳು ಎಚ್ಚರಿಕೆ ವಹಿಸಬೇಕೆಂದು ಹೇಳಿದರು.
ಎನ್‌ಎಸ್‌ಯುಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾತೀಶ್ ಅಳಕೆಮಜಲು ಮಾತನಾಡಿ, ಕೊಂಬೆಟ್ಟು ಕಾಲೇಜಿನಲ್ಲಿ ನಿರಂತರವಾಗಿ ವಿದ್ಯಾರ್ಥಿಗಳ ಮೇಲೆ ಹಲ್ಲೆಯಾಗುತ್ತಿದೆ. ಆದರೆ ಇದನ್ನು ರಾಜಕೀಯವಾಗಿ ಚಿತ್ರಿಸಲಾಗುತ್ತಿದೆ. ಕೆಲವೊಂದು ವಿದ್ಯಾರ್ಥಿ, ಹೊರಗಿನ ಸಂಘಟನೆಗಳು ಇದನ್ನ ಮತೀಯ ಸಂಘರ್ಷವನ್ನಾಗಿ ಮಾಡುತ್ತಿದ್ದಾರೆ. ಇಲ್ಲಿ ಯಾವ ವಿದ್ಯಾರ್ಥಿಗಳೂ ಮತೀಯ ಭಾವನೆಯಲ್ಲಿಲ್ಲ. ಸಂಘಟನೆಗಳು ವಿದ್ಯಾರ್ಥಿಗಳನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಯಾವ ವಿದ್ಯಾರ್ಥಿಗಳು ಹೊಡೆದಾಟದಲ್ಲಿ ಪಾಲ್ಗೊಂಡಿದ್ದಾರೋ ಅವರನ್ನು ಕಾಲೇಜಿನಿಂದ ಅಮಾನತು ಮಾಡಿ. ಸರ್ಕಾರಿ ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಶ್ರೀಮಂತ ವರ್ಗದವರಲ್ಲ. ಎಲ್ಲರೂ ಬಡವರ ಮಕ್ಕಳು. ಅಂತಹ ಮಕ್ಕಳನ್ನು ಹಿಡಿದುಕೊಂಡು ಯಾಕೆ ರಾಜಕೀಯ ಮಾಡುತ್ತೀರಿ..? ಇದನ್ನೇ ಖಾಸಗಿ ಕಾಲೇಜಿನಲ್ಲಿ ಯಾಕೆ ಮಾಡುತ್ತಿಲ್ಲ..? ವಿದ್ಯಾರ್ಥಿಗಳು ಯಾವುದೇ ಪ್ರಚೋದನೆಗೆ ಒಳಗಾಗಬೇಡಿ. ಯಾರೂ ನಿಮ್ಮ ಬೆಂಬಲಕ್ಕೆ ಬರುವುದಿಲ್ಲ. ನಿಮ್ಮ ಉಜ್ವಲ ಭವಿಷ್ಯವನ್ನು ಚಿವುಟಿ ಹಾಕುವ ಕೆಲಸ ಮಾಡುತ್ತಿದ್ದಾರೆ. ಇದು ನಿಮಗೆ ಅರ್ಥವಾಗುತ್ತಿಲ್ಲ. ಯಾವುದೇ ಮತೀಯ ಸಂಘಟನೆಗಳ ಸಂಚಿಗೆ ಬಲಿಯಾಗದೆ ಇದೆಲ್ಲವೂ ಷಡ್ಯಂತ್ರ ಎನ್ನುವುದನ್ನು ಅರಿತುಕೊಳ್ಳಿ. ಗಲಾಟೆಯಿಂದ ವಿದ್ಯಾರ್ಥಿಯ ಜೀವಕ್ಕೆ ಹಾನಿಯಾದರೆ ಮಾತನಾಡುವವರು ಯಾರು? ಇದನ್ನೆಲ್ಲಾ ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳ ನಡುವೆ ಏನೇ ಭಿನ್ನಾಭಿಪ್ರಾಯಗಳಿದ್ದರೂ ಅವರವರೇ ಅದನ್ನು ಸರಿಪಡಿಸಿಕೊಳ್ಳಲಿ. ನಿಮಗೇನಾದರೂ ಸಮಸ್ಯೆಗಳಾದರೆ ಕಾಲೇಜು ಆಡಳಿತ ಮಂಡಳಿಯಲ್ಲಿ ಚರ್ಚಿಸಿ. ವಿದ್ಯಾರ್ಥಿಗಳ ವಿಚಾರದಲ್ಲಿ ಹೊರಗಿನ ಸಂಘಟನೆಗಳು ಪ್ರವೇಶ ಮಾಡಿ ವಿದ್ಯಾರ್ಥಿಗಳಲ್ಲಿ ಕೋಮುವಿಷವನ್ನು ಬಿತ್ತುವ ಪ್ರಯತ್ನವನ್ನು ಎನ್‌ಎಸ್‌ಯುಐ ಖಂಡಿಸುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎನ್‌ಎಸ್‌ಯುಐ ಜಿಲ್ಲಾ ಕಾರ್ಯದರ್ಶಿ ಲ್ಯಾಸ್ಟರ್, ಪುತ್ತೂರು ಎನ್‌ಎಸ್‌ಯುಐ ಅಧ್ಯಕ್ಷ ಕೌಶಿಕ್ ಗೌಡ, ಸದಸ್ಯರಾದ ನೌಷಾದ್, ಹ್ಯಾರಿಸ್ ಉಪಸ್ಥಿತರಿದ್ದರು.