ಪುತ್ತೂರಿನ ಸರಕಾರಿ ಪಿ ಯು ಕಾಲೇಜು ಕೊಂಬೆಟ್ಟುವಿನಲ್ಲಿ ಕಳೆದ ಒಂದು ವಾರಗಳಿಂದ ನಡೆಯುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಮೇಲಿನ ಹಲ್ಲೆ, ತ್ರಿಶೂಲ ದಾಳಿ, ಬೆದರಿಕೆಗಳು ನಡೆಯಲು ವಿದ್ಯಾರ್ಥಿಗಳನ್ನು ಪ್ರಚೋದಿಸಿದ ಸಂಘಪರಿವಾರದ ನಾಯಕರೇ ನೇರ ಹೊಣೆ ಎಂದು ಕ್ಯಾಂಪಸ್ ಫ್ರಂಟ್ ಆರೋಪಿಸಿದೆ.
ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿದವರನ್ನು ಹಾಗೂ ಪ್ರಚೋದನೆ ನೀಡಿದ ಸಂಘಪರಿವಾರದ ನಾಯಕರನ್ನು ಶೀಘ್ರ ಬಂಧಿಸುವಂತೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಆಗ್ರಹಿಸಿದೆ.
ಪುತ್ತೂರು ತಾಲೂಕು ದ.ಕ ಜಿಲ್ಲೆಯಲ್ಲಿ ಎರಡನೇ ಶೈಕ್ಷಣಿಕ ಕೇಂದ್ರವಾಗಿ ಬೆಳೆಯುತ್ತಿದೆ, ಸಾವಿರಾರು ವಿದ್ಯಾರ್ಥಿಗಳು ಪರಸ್ಪರ ಸಾಮರಸ್ಯದಿಂದ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳು ಸೌಹಾರ್ದಯುತವಾಗಿ ವಿದ್ಯಾರ್ಜನೆ ಮಾಡುವುದನ್ನು ಸಹಿಸದ ಸಂಘಪರಿವಾರದವರು , ಎಬಿವಿಪಿ ಸಂಘಟನೆಯ ಕಾರ್ಯಕರ್ತರ ಮೂಲಕ ತಾಲೂಕಿನ ಎಲ್ಲಾ ಕಾಲೇಜಿನಲ್ಲಿ ಕೋಮು ಪ್ರಚೋದನಾ ಭಾಷಣ ಮಾಡುತ್ತಿದ್ದಾರೆ. ಸಂಘಪರಿವಾರದ ಮುಖಂಡರ ಒಂದು ತಂಡವು ಎಲ್ಲಾ ಕಾಲೇಜುಗಳಿಗೆ ತರಳಿ ಹಿಂದು ಹುಡುಗಿಯರ ರಕ್ಷಣೆ, ಲವ್ ಜಿಹಾದ್, ಮುಂತಾದ ಮತೀಯ ವಿಚಾರಗಳ ಬಗ್ಗೆ ಮುಸ್ಲಿಂ ವಿದ್ಯಾರ್ಥಿಗಳ ಮೇಲೆ ನಿಗಾ ವಹಿಸುವಂತೆ ಮತ್ತು ಯಾರಾದರೂ ಹಿಂದೂ ಹುಡುಗಿಯರ ಬಳಿ ಮಾತನಾಡಿದರೆ ಹಲ್ಲೆ ಮಾಡುವಂತೆ ಪ್ರಚೋದಿಸಿದ್ದಾರೆ ಅಲ್ಲದೇ ಕಳೆದ ವಾರ ಸರಕಾರಿ ಪಿಯು ಕಾಲೇಜು ಕೊಂಬೆಟ್ಟು ಪರಿಸರದ ನಟರಾಜ ವೇದಿಕೆಗೆ ಹಿಂದೂ ವಿದ್ಯಾರ್ಥಿಗಳನ್ನು ಕರೆಸಿ ಈ ಕಾರ್ಯಕ್ರಮ ಕೂಡ ನಡೆಸಿದ್ದಾರೆ.
ಸಂಘಪರಿವಾರದ ಕೋಮು ಪ್ರಚೋದನೆಗೆ ಒಳಗಾಗಿ ಕೊಂಬೆಟ್ಟು ಕಾಲೇಜಿನಲ್ಲಿ ಇತ್ತೀಚಿಗೆ ನಾಲ್ಕು ಹಲ್ಲೆ ಪ್ರಕರಣಗಳು ನಡೆದಿದೆ, ಇದೆಲ್ಲವೂ ಕ್ಷುಲ್ಲಕ ವಿಚಾರವನ್ನು ನೆಪವಾಗಿಟ್ಟುಕೊಂಡು ನಡೆದ ಘಟನೆಯಾಗಿದೆ. ಮೂರನೇ ಘಟನೆಯಲ್ಲಿ ಹಲ್ಲೆಯಾದ ವಿದ್ಯಾರ್ಥಿಗೆ ನ್ಯಾಯ ಒದಗಿಸುವಂತೆ ಕ್ಯಾಂಪಸ್ ಫ್ರಂಟ್ ಪ್ರತಿಭಟನೆ ನಡೆಸಿದ್ದು, ಅಲ್ಲದೇ ಕಾಲೇಜಿಗೆ ನಿಯೋಗ ತೆರಳಿ ಹಲ್ಲೆ ಮಾಡಿದವರನ್ನು ಅಮಾನತು ಮಾಡುವಂತೆ ಕೋರಲಾಗಿತ್ತು. ಇದನ್ನರಿತ ಸಂಘಪರಿವಾರ ಹಿಂದೂ ವಿದ್ಯಾರ್ಥಿಗಳಿಗೆ ಹಲ್ಲೆ ಯತ್ನವಾಗಿದೆ ಎಂದು ಗಾಳಿ ಸುದ್ದಿ ಹರಡಿ ಬುಧವಾರದಂದು ಎಬಿವಿಪಿ ನೇತೃತ್ವದಲ್ಲಿ ಕಾಲ್ನಡಿಗೆ ಜಾಥಾ ಮಾಡಿ ಕಾಲೇಜಿನಲ್ಲಿ ಪ್ರತಿಭಟನೆ ನಡೆಸಲಾಗಿದೆ. ಈ ಪ್ರತಿಭಟನೆಗೆ ಸಂಘಪರಿವಾರವು ಹೊರಗಿನ ಹಲವು ಕಾರ್ಯಕರ್ತರನ್ನೂ ಕೂಡ ಸೇರಿಸಿ ಅಲ್ಲಿ ಕೈಫುದ್ದೀನ್,ಇಮ್ರಾನ್, ತೌಸೀಫ್ ಎಂಬ ವಿದ್ಯಾರ್ಥಿಗಳಿಗೆ ವಿನಾಕಾರಣ ತ್ರಿಶೂಲದಿಂದ ಹಲ್ಲೆ ನಡೆಸಿದ್ದಾರೆ.
ಈ ಎಲ್ಲಾ ಘಟನೆಯನ್ನು ನೋಡುವಾಗ ಸಂಘಪರಿವಾರವು ವಿದ್ಯಾರ್ಥಿಗಳನ್ನು ಬಳಸಿ ಅವರ ಕೈಗೆ ಆಯುಧಗಳನ್ನು ನೀಡಿ ಕೋಮುಗಲಭೆಗೆ ಪ್ರಚೋದಿಸುತ್ತಿರುವುದು ಸ್ಪಷ್ಟವಾಗುತ್ತಿದೆ. ಇದೆಲ್ಲಾ ನಡೆಯುತ್ತಿದ್ದರೂ ಪೋಲಿಸ್ ಇಲಾಖೆಯು ಮೌನವಾಗಿರುವುದು ಅನುಮಾನಾಸ್ಪದ. ಆದುದರಿಂದ ಈ ಎಲ್ಲಾ ಘಟನೆಗಳ ಬಗ್ಗೆ ಸೂಕ್ತ ತನಿಖೆ ನಡೆಸಲು ಇಲಾಖೆಯು ಉನ್ನತ ಅಧಿಕಾರಿಗಳನ್ನು ನೇಮಿಸಿಬೇಕು, ದುಷ್ಕರ್ಮಿಗಳಿಗೆ ಸೂಕ್ತ ಶಿಕ್ಷೆ ನೀಡಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು, ತ್ರಿಶೂಲದಿಂದ ಹಲ್ಲೆ ನಡೆಸಿದ ಆರೋಪಿಗಳನ್ನು ಶೀಘ್ರ ಬಂಧನ ನಡೆಸದಿದ್ದಲ್ಲಿ ಜಿಲ್ಲೆಯ ವಿದ್ಯಾರ್ಥಿಗಳನ್ನು ಸೇರಿಸಿ “ಪುತ್ತೂರು ಚಲೋ” ನಡೆಸಲಾಗುವುದು ಎಂದು ಕ್ಯಾಂಪಸ್ ಫ್ರಂಟ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ.
ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಕರ್ನಾಟಕದ ರಾಜ್ಯ ಪ್ರ.ಕಾರ್ಯದರ್ಶಿ ಅನೀಶ್ ಕುಂಬ್ರ, ಕ್ಯಾಂಪಸ್ ಫ್ರಂಟ್ ಕರ್ನಾಟಕದ ರಾಜ್ಯ ಕೋಶಾಧಿಕಾರಿ ಸವಾದ್ ಕಲ್ಲರ್ಪೆ, ಕ್ಯಾಂಪಸ್ ಫ್ರಂಟ್ ದ.ಕ. ದ ಜಿಲ್ಲಾ ಮುಖಂಡ ರಿಯಾಝ್ ಅಂಕತ್ತಡ್ಕ, ಕ್ಯಾಂಪಸ್ ಫ್ರಂಟ್ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಮುಸ್ತಫಾ ಕೊಡಿಪ್ಪಾಡಿ ಉಪಸ್ಥಿತರಿದ್ದರು.