ಹಾವೇರಿ: ನೀವೂ ನನ್ನ ಗೆಲ್ಲಿಸಿದ್ದೀರಿ ಪ್ರೀತಿ ಕೊಟ್ಟಿದ್ದೀರಿ.. ರೊಟ್ಟಿ ಕೊಟ್ಟು ಊಟ ನೀಡಿದ್ದೀರಿ.. ಆದರೆ ನಾನು ಪದೇ ಪದೆ ಇಲ್ಲಿ ಬರೋಕೆ ಆಗುತ್ತಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಭಾವುಕರಾಗಿ ಮಾತನಾಡಿದ್ದಾರೆ.
ಶಿಗ್ಗಾವಿ ಪಟ್ಟಣದಲ್ಲಿ ನಡೆಯುತ್ತಿರುವ ಚನ್ನಮ್ಮ ಸಭಾಭವನ ಅಡಿಗಲ್ಲು ಸಮಾರಂಭದಲ್ಲಿ ಕ್ಷೇತ್ರದ ಜನರ ಪ್ರೀತಿ ಹಾಗೂ ಭಾವನೆಗಳನ್ನು ನೆನೆದ ಸಿಎಂ ಬೊಮ್ಮಾಯಿ ಅವರು, ನೀವೂ ನನ್ನ ಗೆಲ್ಲಿಸಿದ್ದೀರಿ ಪ್ರೀತಿ ಕೊಟ್ಟಿದ್ದೀರಿ. ರೊಟ್ಟಿ ಕೊಟ್ಟು ಊಟ ನೀಡಿದ್ದೀರಿ. ನಾನು ಪದೇ ಪದೆ ಇಲ್ಲಿ ಬರೋಕೆ ಆಗೋದಿಲ್ಲ. ಹೀಗಾಗಿ ಅಪರೂಪಕ್ಕೆ ಒಮ್ಮೆ ಬಂದಾಗ ನಿಮ್ಮನ್ನು ನೋಡಿ ಖುಷಿ ಆಗುತ್ತದೆ. ನಾನು ಭಾವನಾತ್ಮಕ ವ್ಯಕ್ತಿ ಅದನ್ನು ಕಂಟ್ರೋಲ್ ಮಾಡಿಕೊಂಡೆ. ಆದರೆ ತಡೆಯೋಕೆ ಆಗ್ತಾ ಇಲ್ಲಾ ಎಂದು ಭಾವುಕರಾಗಿ ಕ್ಷಣ ಕಾಲ ಮೌನಕ್ಕೆ ಶರಣಾದರು.
ಸಿಎಂ ಮಾತುಗಳನ್ನು ಅಲಿಸಿದ ಸಮಾರಂಭದಲ್ಲಿ ಹಾಜರಿದ್ದ ಕ್ಷೇತ್ರ ಜನರು ಸಂಪೂರ್ಣವಾಗಿ ಸೈಲೆಂಟ್ ಆದ್ರು. ಮಾತು ಮುಂದುವರಿಸಿದ ಸಿಎಂ, ಕೆಲವು ಊರುಗಳಿಗೆ ತನ್ನದೇ ಆದ ಐತಿಹಾಸಿಕ ಕುರುಹುಗಳಿರುತ್ತವೆ. ಇದು ಸಂತರ ನಾಡು.. ವೈಚಾರಿಕತೆ, ವಿಭಿನ್ನ ಚಿಂತನೆ ಮಾಡಿದ ಕನಕದಾಸರು, ಶಿಶುನಾಳ ಷರೀಫರು, ಅಪರೂಪದ ಮಣ್ಣಿನ ಗುಣ ಶಿಗ್ಗಾವಿ ಕ್ಷೇತ್ರದ್ದು. ಈ ವೈಚಾರಿಕತೆ ಹಿಡಿದುಕೊಂಡು ಎಲ್ಲರೂ ಒಂದುಗೂಡಿ ಕೆಲಸ ಮಾಡಿದರೆ ಗೆಲುವು, ಇಲ್ಲದಿದ್ದರೆ ಕಷ್ಟ.
ಜೀವನದಲ್ಲಿ ಯಾವುದೂ ಶಾಶ್ವತ ಅಲ್ಲ, ಈ ಬದುಕೇ ಶಾಶ್ವತ ಅಲ್ಲ. ಈ ಸ್ಥಾನಮಾನಗಳೂ ಶಾಶ್ವತ ಅಲ್ಲ. ಈ ಅರಿವು ನಮಗೆ ಪ್ರತಿ ಕ್ಷಣ ಇರಬೇಕು. ನಿಮ್ಮ ಆಶೀರ್ವಾದ ನಾನು ಸಿಎಂ ಆಗಿದ್ದೇನೆ. ಈ ಕ್ಷೇತ್ರದ ಹೊರಗೆ ನಾನು ಗೃಹ ಮಂತ್ರಿ, ನೀರಾವರಿ ಸಚಿವ , ಸಿಎಂ ಆದರೆ ಶಿಗ್ಗಾವಿಗೆ ಬಂದಾಗ ಬರೀ ಬಸವರಾಜ ಬೊಮ್ಮಾಯಿ ಅಷ್ಟೇ. ಇಲ್ಲಿ ಬಸವರಾಜ ಬೊಮ್ಮಾಯಿ ಅನ್ನೋದಷ್ಟೆ ಶಾಶ್ವತ, ಉಳಿದೆಲ್ಲಾ ಅಧಿಕಾರ ಪದವಿ ಶಾಶ್ವತ ಅಲ್ಲ. ನಾನು ನಿಮ್ಮೂರಿಗೆ ಬಂದಾಗ ರೊಟ್ಟಿ ತಿನ್ನಿಸಿದ್ದೀರಿ, ನವಣಕ್ಕಿ ಅನ್ನ ಮಾಡಿ ತಿನಿಸಿದಿರಿ. ನಾನು ಅದನ್ನ ಮರೆಯೋಕೆ ಸಾಧ್ಯವಿಲ್ಲ ಎಂದು ಗದ್ಗದಿತರಾದರು.
ನಾನು ಭಾವನಾತ್ಮಕವಾಗಿ ಮಾತಾಡಬಾರದು ಅಂತ ಬಹಳ ಪ್ರಯತ್ನ ಮಾಡ್ತೀನಿ. ಆದರೆ ನಿಮ್ಮನ್ನು ನೋಡಿದಾಗ ಆ ಭಾವನೆ ಬರ್ತಾವೆ ದೊಡ್ಡ ಜವಾಬ್ದಾರಿ ನನ್ನ ಮೇಲಿದೆ. ನಿಮ್ಮ ಆಶೀರ್ವಾದ ಶಕ್ತಿ ಇಲ್ಲಿವರೆಗೂ ತಂದು ನಿಲ್ಲಿಸಿದೆ. ಮುಂದೆ ಸವಾಲು ಎದುರಿಸೋ ಶಕ್ತಿ ಕೂಡಾ ನಿಮ್ಮ ಆಶೀರ್ವಾದ ದಿಂದ ಸಿಗಲಿದೆ. ಚೆನ್ನಮ್ಮ ರಾಜ್ಯ ಪಡೆಯೋಕೆ ಹೋರಾಟ ಮಾಡಲಿಲ್ಲ. ಅಲೆಕ್ಸಾಂಡರ್ ದೂರದ ದೇಶದಿಂದ ಸಿಂಧು ತಟದ ವರೆಗೆ ಬಂದ. ಆದರೆ ಕಿತ್ತೂರು ಚೆನ್ನಮ್ಮ ರಾಜ್ಯದ ಜನರ ರಕ್ಷಣೆಗೆ, ಸ್ವಾಭಿಮಾನಕ್ಕಾಗಿ ಹೋರಾಡಿದ್ದಳು. ಪ್ರತಿಯೊಬ್ಬ ಕಿತ್ತೂರು ನಾಗರಿಕ ಯೋಧರಾಗಿ ಪರಿವರ್ತನೆ ಆದರು, ಇಂದು ಈ ರಾಜ್ಯ, ಸಮುದಾಯದ ಮುಂದೆ ಇರೋದು ಅಸ್ಮಿತೆ, ಸ್ವಾಭಿಮಾನಕ್ಕಾಗಿ ಯೋಧರಾಗಿ ಹೋರಾಟ ಮಾಡೋ ಅಗತ್ಯ ಇದೆ. ಇತಿಹಾಸ ನಾವು ಅರ್ಥ ಮಾಡಿಕೊಳ್ಳಬೇಕಿದೆ. ಒಂದು ಸಮುದಾಯ ಬಹಳ ಮುಂದೆ ಹೋಗಿ ಇನ್ನೊಂದು ಸಮುದಾಯ ಹಿಂದುಳಿದರೆ ಮುಂದೆ ಹೋದ ಸಮುದಾಯಕ್ಕೂ ಒಳ್ಳೆದಾಗಲ್ಲ ಎಂದರು.